ಮಂಗಳೂರು:ಲಾಕ್ಡೌನ್ ಜಾರಿಯಾಗಿರುವುದರಿಂದ ಬೆಂಗಳೂರು-ಮಂಗಳೂರು ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಊಟದ ಸಮಸ್ಯೆ ಎದುರಾಗಿದೆ. ಹೆದ್ದಾರಿಯಲ್ಲಿ ಸಾಮಾನ್ಯವಾಗಿ ಹತ್ತಾರು ಹೋಟೆಲ್ಗಳು ತೆರದಿರುತ್ತಿದ್ದವು. ಆದರೆ ಲಾಕ್ಡೌನ್ನಿಂದಾಗಿ ಈ ಎಲ್ಲಾ ಹೋಟೆಲ್ಗಳು ಈಗ ಬಂದ್ ಆಗಿವೆ.
ಈ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ವತಿಯಿಂದ ಆಹಾರದ ವ್ಯಸಸ್ಥೆ ಮಾಡಲಾಗುತ್ತಿದೆ.
ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ನೀತಿ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು, ಅನ್ನ-ನೀರಿಲ್ಲದೇ ಸಂಚರಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ವಾಹನ ಓಡಿಸುವ ಚಾಲಕರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆ ಆಹಾರ, ನೀರು ಇಲ್ಲದಿರುವುದು. ಕೆಲವು ಚಾಲಕರು ತಮ್ಮ ವಾಹನದಲ್ಲೇ ಅಡುಗೆ ವ್ಯವಸ್ಥೆ ಮಾಡುತ್ತಿದ್ದರೆ, ಬಹುತೇಕ ವಾಹನ ಚಾಲಕರಿಗೆ ಈ ಸೌಲಭ್ಯ ಇಲ್ಲ. ಇದನ್ನು ಮನಗಂಡ ಸಂತ ಜಾರ್ಜ್ ವಿದ್ಯಾ ಸಂಸ್ಥೆ ನೆಲ್ಯಾಡಿ ಪದಾಧಿಕಾರಿಗಳು, ನೀತಿ ತಂಡದ ಕಾರ್ಯಕರ್ತರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಇದಕ್ಕೆ ಸ್ಧಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ತಾಲೂಕು ಪಂಚಾಯತ್ ಸದಸ್ಯರು ಬೆಂಬಲ ನೀಡುತ್ತಿದ್ದಾರೆ. ಆಹಾರ, ನೀರು ಪಡೆದುಕೊಂಡ ಚಾಲಕರು ತಮಗೆ ಊಟ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ ಹೊರಡುತ್ತಿದ್ದಾರೆ.