ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವುದು ಈ ವರ್ಷ ವಿದ್ಯಾರ್ಥಿಗಳಿಗೆ ಚಾಲೆಂಜ್ ಆಗಿದೆ. ಕೊರೊನಾ ಕಾರಣದಿಂದ ಪಠ್ಯಕ್ರಮ ಪೂರ್ಣಗೊಳ್ಳದೇ ಇದ್ದರೂ, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಕೊರೊನಾ ಕಾರಣದಿಂದ 2020-21ರ ಶೈಕ್ಷಣಿಕ ವರ್ಷ ಗೊಂದಲದ ಗೂಡಾಗಿತ್ತು. ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಏನು ಮಾಡುವುದು ಎಂಬುದನ್ನು ಸರಿಯಾಗಿ ನಿರ್ಧರಿಸಲು ಆಡಳಿತ ವರ್ಗಕ್ಕೆ ಸಾಧ್ಯವಾಗಿರಲಿಲ್ಲ. ಇದರ ನಡುವೆ ಈ ಬಾರಿ ಎಸ್ಎಸ್ಎಲ್ಸಿ ವರ್ಷ ಪೂರ್ಣ ಮಾಡಬೇಕಾದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು, ಡಿಸೆಂಬರ್ನಿಂದ ಆಫ್ ಲೈನ್ ತರಗತಿಗಳನ್ನು ಆರಂಭಿಸಲಾಗಿತ್ತು.
ಈಗಾಗಲೇ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿಯ ಶೇ.30 ರಷ್ಟು ಪಠ್ಯಕ್ರಮ ಕಡಿತಗೊಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.70ರಷ್ಟು ಸಿಲೆಬಸ್ ಇನ್ನೂ ಪೂರ್ಣವಾಗಿಲ್ಲ. ಈ ಹಿಂದಿನ ವರ್ಷಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಸಿಲೆಬಸ್ ಪೂರ್ಣಗೊಂಡು ವಿದ್ಯಾರ್ಥಿಗಳು ಮರು ಮನನದಲ್ಲಿ ತೊಡಗಿಕೊಂಡಿದ್ದರು. ಆದರೆ, ಇದೀಗ ನೀಡಲಾಗಿರುವ ಸಿಲೆಬಸ್ ಪೂರ್ಣಗೊಂಡಿಲ್ಲ. ಈ ಬಾರಿ ಪರೀಕ್ಷೆ ಜೂನ್ನಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.