ಬಂಟ್ವಾಳ/ಮಂಗಳೂರು: ರಾಜ್ಯದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಇರುವ ಬಿಲ್ಲವ, ಈಡಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಜನವರಿ 6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಫ್ರೀಡಂ ಪಾರ್ಕ್ನಲ್ಲಿ ಆಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಶ್ರೀಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳಕ್ಕೆ ಶನಿವಾರ ಆಗಮಿಸಿ, ಶ್ರೀ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಲ್ಲವ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಎರಡು ಸಚಿವರಿದ್ದರೂ ಸಮುದಾಯಕ್ಕೆ ಏನೂ ಲಾಭವಿಲ್ಲ. ಬಿಲ್ಲವ ಸಮುದಾಯದ ವೋಟು ಬೇಕು, ಕೋಟಾ ಬೇಕು. ಆದರೆ ಸಮುದಾಯ ಬೇಡ ಎನ್ನುವ ಧೋರಣೆ ಸಲ್ಲದು. ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡಿ 500 ಕೋಟಿ ರೂ.ಗಳನ್ನು ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.