ಮಂಗಳೂರು:ಕೊರೊನಾ ಭೀತಿಯ ನಡುವೆ ಈ ಬಾರಿ ಶ್ರೀ ಕೃಷ್ಣಜನ್ಮಾಷ್ಟಮಿ ಆಗಮಿಸಿದೆ. ಜನರು ಹಬ್ಬವನ್ನು ಸ್ವಾಗತಿಸುವ ಸಂಭ್ರಮದಲ್ಲಿಲ್ಲ. ಕೊರೊನಾ ಸಂಕಷ್ಟ ಒಂದು ಕಡೆಯಾದರೆ ಮಂಗಳೂರಿನಲ್ಲಿ ಆಟಿ(ಆಷಾಢ) ಇನ್ನೂ ಮುಗಿದಿಲ್ಲವಾದ್ದರಿಂದ ಆಟಿಯಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಜನರು ಆಚರಿಸುತ್ತಿಲ್ಲ.
ಮಂಗಳೂರಿನಲ್ಲಿ ಸಂಭ್ರಮವಿಲ್ಲದ ಶ್ರೀಕೃಷ್ಣ ಜನ್ಮಾಷ್ಟಮಿ ಆದ್ದರಿಂದ ಎಲ್ಲಾ ಕಡೆಗಳಲ್ಲಿ ಮಾಮೂಲಿಯಂತೆ ನಡೆಯುವ ಮೊಸರು ಕುಡಿಕೆ ಕಾರ್ಯಕ್ರಮ, ಶ್ರೀಕೃಷ್ಣ ವೇಷಧಾರಿಗಳ ಸ್ಪರ್ಧೆಗಳಿಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿ ನೀರಸವಾಗಿದೆ.
ಮಾರುಕಟ್ಟೆಯಲ್ಲಿ ರಾಶಿ ರಾಶಿ ಸಿಗುವ ಮೂಡೆ(ಕಡುಬು ಕೊಟ್ಟೆ) ಗೂ ಈ ಬಾರಿ ತತ್ವಾರ ಉಂಟಾಗಿದೆ. ವ್ಯಾಪಾರಿಗಳ ಪ್ರಕಾರ ಈ ಬಾರಿ ಎಲ್ಲಾ ಕಡೆಗಳಲ್ಲಿ ನೆರೆ ಬಂದಿರೋದರಿಂದ ಮೂಡೆ ಎಲೆ ಸಿಗುತ್ತಿಲ್ಲ. ಮೂಡೆ ಗಿಡದ ಪೊದೆ ಬೆಳೆಯುವುದೇ ನೀರಿರುವ ಪ್ರದೇಶಗಳಲ್ಲಿ, ಆದರೆ ಈ ಬಾರಿ ಮಾಮೂಲಿ ಮೂಡೆ ಎಲೆ ತರುವ ಪ್ರದೇಶಗಳು ಜಲಾವೃತವಾಗಿವೆ. ಆದ್ದರಿಂದ ಮೂಡೆ ಈ ಬಾರಿ ಕಡಿಮೆ ಇದೆ ಎನ್ನುತ್ತಾರೆ.
ಅದೇ ರೀತಿ ಹೂವು ಕೂಡಾ ಸಾಕಷ್ಟು ಕಡಿಮೆ ಇದ್ದು, ಹಾಸನ, ಹಾವೇರಿ ಕಡೆಗಳಿಂದ ಬರುವ ಹೂವುಗಳು ಈ ಬಾರಿ ಬಂದಿಲ್ಲ. ಒಟ್ಟಿನಲ್ಲಿ ಈ ಬಾರಿ ಮಂಗಳೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ, ಸಂಭ್ರಮವಿಲ್ಲ.