ಮಂಗಳೂರು: ನಗರದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ವಿರಳಾತಿವಿರಳ ಕೆಂಚಳಿಲು ಸಂತಾನಾಭಿವೃದ್ಧಿ ಸಂಶೋಧನಾ ಪ್ರಾಜೆಕ್ಟ್ ಅನ್ನು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ನೀಡಿದೆ.
5ವರ್ಷಗಳಲ್ಲಿ ಈ ಅಪರೂಪದ ಕೆಂಚಳಿಲು ಕೃತಕ ಸಂತಾನೋತ್ಪತ್ತಿ ಸಂಶೋಧನೆ ಮಾಡಬೇಕಿದ್ದು, ಇದಕ್ಕೆ 4ಕೋಟಿ ರೂ. ವೆಚ್ಚ ತಗುಲುತ್ತದೆ. ಇದಕ್ಕೆ ತಲಾ 2 ಕೋಟಿ ರೂ. ಯಂತೆ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ.
ದೇಶದಲ್ಲಿ ಸುಮಾರು 100ರಷ್ಟು ಪ್ರಾಣಿ ಸಂಗ್ರಹಾಲಯವಿದ್ದರೂ, ಈ ಪೈಕಿ 10 ಪ್ರಾಣಿ ಸಂಗ್ರಹಾಲಯವನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಒಂದೊಂದು ಪ್ರಾಣಿ ಸಂಗ್ರಹಾಲಯ, ವನ್ಯಧಾಮಗಳಿಗೆ 1-2 ಪ್ರಾಜೆಕ್ಟ್ ಗಳನ್ನು ನೀಡಲಾಗಿದೆ. ಪಿಲಿಕುಳದಲ್ಲೀಗ 3 ಕೆಂಚಳಿಲು ಇದ್ದು, ಇವುಗಳ ಮೂಲಕ ಸಂತಾನೋತ್ಪತ್ತಿ ಪ್ರಕ್ರಿಯೆ ಸಂಶೋಧನೆ ನಡೆಸಬೇಕಾಗಿದೆ. ಅಗತ್ಯಬಿದ್ದರೆ ಬೇರೆಡೆಯಿಂದ ಇಲ್ಲಿಯ ಬೇರೆ ಪ್ರಾಣಿಗಳನ್ನು ವಿನಿಮಯ ಮಾಡಿಕೊಂಡು ಕೆಂಚಳಿಲು ತರಬಹುದು ಎಂದು ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ವಿಶ್ವದ ಏಕೈಕ ಕಾಳಿಂಗಸರ್ಪ ಕೃತಕ ಸಂತಾನಾಭಿವೃದ್ಧಿ ಕೇಂದ್ರವಾಗಿ ಪ್ರಸಿದ್ಧ ಹೊಂದಿದ್ದ ಪಿಲಿಕುಳ ವನ್ಯಜೀವಿ ಧಾಮದಲ್ಲಿ ಕಾಳಿಂಗ ಸರ್ಪದ ಕೃತಕ ಮರಿ ಮಾಡಿ ಸಂತಾನೋತ್ಪತ್ತಿ ಮಾಡಿರುವ ದಾಖಲೆ ಇದೆ. ಈಗಾಗಲೇ 150 ಕಾಳಿಂಗ ಸರ್ಪದ ಮರಿ ಮಾಡಿ ಕಾಡಿಗೆ ಬಿಡಲಾಗಿದೆ. ಇದೀಗ ಪಿಲಿಕುಳದಲ್ಲಿ 17 ಕಾಳಿಂಗ ಸರ್ಪಗಳಿವೆ. ಸಂತಾನೋತ್ಪತ್ತಿ ಪ್ರಕ್ರಿಯೆಗೆ ಪ್ರತ್ಯೇಕ ಕೇಂದ್ರ ತೆರೆದು ಕೃತಕವಾಗಿ ಬಂಡೆ, ಮರಗಿಡಗಳ ಪೊದೆಗಳನ್ನು ಸೃಷ್ಟಿಸಿ ನೈಸರ್ಗಿಕ ಕಾಡಿನ ವಾತಾವರಣ ನಿರ್ಮಿಸಲಾಗುತ್ತದೆ.
ಮೊಟ್ಟೆ ಇಡುವ ಕಾಲದಲ್ಲಿ ಹಾವುಗಳು ಹುಲ್ಲು, ಮರದ ತೊಗಟೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಕಾಳಿಂಗ ಸರ್ಪ ಒಂದು ಬಾರಿಗೆ ಸುಮಾರು 20 ರಿಂದ 40 ಮೊಟ್ಟೆಗಳನ್ನು ಇಡುತ್ತದೆ. ಗಂಡು ಹಾವು ಹೆಣ್ಣು ಹಾವಿನೊಂದಿಗೇ ಇದ್ದು ಮೊಟ್ಟೆಗಳ ರಕ್ಷಣೆ ಮಾಡುತ್ತದೆ. ಈ ಸಂದರ್ಭ ಎರಡೂ ಹಾವುಗಳು ಆಹಾರ ಸೇವಿಸುವುದಿಲ್ಲ. ಮೊಟ್ಟೆಯಿಂದ ಹಾವು ಮರಿಗಳು ಹೊರ ಬರುತ್ತಿದ್ದಂತೆ ಗಂಡು ಹಾಗೂ ಹೆಣ್ಣು ಹಾವುಗಳನ್ನು ಗೂಡಿನಿಂದ ಪ್ರತ್ಯೇಕ ಮಾಡಲಾಗುತ್ತದೆ. ಇವುಗಳನ್ನು ನೋಡಲು ತಜ್ಞ ಪಶುವೈದ್ಯರನ್ನು ನೇಮಕ ಮಾಡಲಾಗುತ್ತದೆ. ವೈಜ್ಞಾನಿಕ ಅಧಿಕಾರಿಗಳು, ಅನುಭವಿ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಈ ನಡುವೆ ಕೇಂದ್ರ ಪ್ರಾಧಿಕಾರ ತಜ್ಞರಿಂದ ಭೇಟಿ ಹಾಗೂ ಪರಿಶೀಲನೆ ನಡೆಸುತ್ತದೆ.