ಮಂಗಳೂರು:ನಾಗಾರಾಧನೆಯ ಪ್ರಮುಖ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಾಗರ ಕಲ್ಲಿಗೆ ನಾಗತನು ಸೇವೆ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿರುವ ನಾಗರ ಕಲ್ಲಿಗೆ ಭಕ್ತರು ಹಾಲು ಮತ್ತು ಎಳನೀರಿನಿಂದ ಶ್ರದ್ಧಾ ಭಕ್ತಿಪೂರ್ವಕವಾಗಿ ಅಭಿಷೇಕ ನೆರವೇರಿಸಿ ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ನಾಗತನುವಿನೊಂದಿಗೆ ಹಿಂಗಾರ, ಸಂಪಿಗೆ, ಕೇದಗೆ ಮೊದಲಾದ ಹೂಗಳನ್ನು ವಿಶೇಷವಾಗಿ ಸಮರ್ಪಿಸಿದರು.
ಮಂಗಳೂರಿನಲ್ಲೂ ವಿಶೇಷ ಪೊಜೆ:ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತ ಭಕ್ತರು ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ನೆರವೇರಿಸಿದರು.
ಮುಂಜಾನೆ ಐದು ಗಂಟೆಯಿಂದ ಮಧ್ಯಾಹ್ನ ಮಹಾಪೂಜೆಯವರೆಗೆ ಇಲ್ಲಿ ಪ್ರತಿ ವರ್ಷ ಸುಮಾರು 40 ಸಾವಿರದಷ್ಟು ಭಕ್ತರು ನಾಗ ದೇವರಿಗೆ ಸೀಯಾಳಭಿಷೇಕ, ಕ್ಷೀರಾಭಿಷೇಕ ನೆರವೇರಿಸುತ್ತಾರೆ. ನಾಗ ದೇವರ ನೂರಾರು ಮೂರ್ತಿಗಳಿಗೆ ಭಕ್ತರು ನೀಡಿದ ಸೀಯಾಳದ ನೀರು ಮತ್ತು ಹಾಲನ್ನು ದೇವರಿಗೆ ಸಮರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳ ಪ್ರತಿ ಕುಟುಂಬಗಳು ತಮ್ಮ ನಾಗ ದೇವರ ಮೂಲ ಸ್ಥಾನಗಳಿಗೆ ತೆರಳಿ ಕ್ಷೀರಾಭಿಷೇಕ, ಸೀಯಾಳಭಿಷೇಕ ನೆರವೇರಿಸುತ್ತಾರೆ.
ಕುಡುಪು ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಂದು ನಾಗರಪಂಚಮಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆಯಿತು.