ಮಂಗಳೂರು :ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಖಾಲಿ ಇರುವ 190 ಪೌರ ಕಾರ್ಮಿಕರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಮೇಯರ್ ಅವಧಿ ಮುಗಿಯುವ ಹಿನ್ನೆಲೆ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಚಾರ ಮಾಡಲಾಗಿದೆ. 197 ಮಂದಿಯನ್ನು ನೇರ ಪಾವತಿಯಲ್ಲಿ ಭರ್ತಿಗೊಳಿಸಲಾಗುವುದು ಎಂದರು.
ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ರವಾನಿಸುವ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಶುಲ್ಕ ಪಾವತಿಸಿದ ಕೂಡಲೇ ತಾತ್ಕಾಲಿಕ ಪರವಾನಿಗೆ ಡೌನ್‌ಲೋಡ್‌ಗೆ ಅವಕಾಶ ನೀಡಲಾಗಿದೆ ಎಂದರು.
ವ್ಯವಸ್ಥೆ ಸರಳೀಕರಣ ಮಾಡಿರುವುದರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪಿದ್ದು, ಸಮಯ ವ್ಯರ್ಥ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಲಾಗಿದೆ. ಇದೇ ರೀತಿ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪಾವತಿಯ ವ್ಯವಸ್ಥೆಯನ್ನೂ ಆನ್‌ಲೈನ್ ಮೂಲಕ ಮಾಡುವ ವ್ಯವಸ್ಥೆಯ ಪ್ರಕ್ರಿಯೆಯು ನಡೆಯುತ್ತಿದೆ. ಉದ್ದಿಮೆ ಪರವಾನಿಗೆ ಮತ್ತು ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಿಂದ ಆಗಲಿದೆ ಎಂದರು.
ರಾಜ್ಯದಲ್ಲಿ BBMPಯನ್ನು ಹೊರತುಪಡಿಸಿ ಉಳಿದ ಮಹಾನಗರ ಪಾಲಿಕೆಗಳ ಪೈಕಿ ವಾರ್ಡ್ ಕಮಿಟಿ ರಚಿಸಿದ ಏಕೈಕ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಮಂಗಳೂರು ಮಹಾನಗರ ಪಾಲಿಕೆ ಪಾತ್ರವಾಗಿದೆ. ಪಾಲಿಕೆಯ ಎಲ್ಲಾ 60 ವಾರ್ಡ್‌ಗಳಿಗೆ ವಾರ್ಡ್ ಸಮಿತಿ ರಚಿಸಿ ಆದೇಶಿಸಲಾಗಿದೆ.
ಈಗಾಗಲೇ ಕಾರ್ಯಾಗಾರ ನಡೆಸಲಾಗಿದ್ದು, ವಾರ್ಡ್ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ವಾರ್ಡ್ ಸಮಿತಿಗಳಿಗೆ ಸಭೆಯನ್ನು ನಡೆಸಲು ಸೂಚನೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಓದಿ:ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ ವಧೆ - ಮಾಂಸ ಮಾರಾಟ ನಿಷೇಧ..