ಸುಬ್ರಹ್ಮಣ್ಯ (ದಕ್ಷಿನ ಕನ್ನಡ) :ಕುಮಾರ ಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನವಾದ ಇಂದು ಮಂಗಳವಾರ ವಿಶೇಷ ಪೂಜೆಯನ್ನು ನೆರವೇರಿಸಿದರು.
ಇಂದು ಮದ್ಯಾಹ್ನ ಸುಮಾರು 12 ಗಂಟೆಯ ಶುಭಮುಹೂರ್ತದಲ್ಲಿ ಸಮುದ್ರ ಮಟ್ಟದಿಂದ ಸುಮಾರು 4000 ಅಡಿಗಳಷ್ಟು ಎತ್ತರವಿರುವ ಕುಮಾರ ಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಸ್ವಾಮಿ ದೇವರ ಪಾದಗಳಿಗೆ ಪ್ರಧಾನ ಅರ್ಚಕರು ವಿವಿಧ ವೈಧಿಕ ವಿದಿ ವಿಧಾನಗಳ ಮೂಲಕ ಪೂಜೆಯನ್ನು ಸಲ್ಲಿಸಿದರು. ಅಲ್ಲದೆ ಪಾದದ ಬಳಿಯಿರುವ ವಾಸುಕಿಗೂ ಪೂಜೆ ನೆರವೇರಿಸಿದರು.
ಆರಂಭದಲ್ಲಿ ಪ್ರಧಾನ ಅರ್ಚಕರು ಕುಮಾರನ ಪಾದಗಳಿಗೆ ಮತ್ತು ಪಕ್ಕದಲ್ಲಿನ ವಾಸಕಿಗೆ ಅಭಿಷೇಕವನ್ನು ನೆರವೇರಿಸಿದರು. ನಂತರದಲ್ಲಿ ಪುಷ್ಪಾಲಂಕಾರ ಮಾಡಿ ಫಲಸಮರ್ಪಣೆಯನ್ನು ಮಾಡಿ, ನೈವೇದ್ಯವನ್ನು ಸಮರ್ಪಿಸಿದರು. ಬಳಿಕ ವೈಧಿಕರ ಮಂತ್ರೋಚ್ಛಾರಣೆಯ ನಡುವೆ ಪ್ರಧಾನ ಅರ್ಚಕರು ಪೂಜೆಯನ್ನು ನೆರವೇರಿಸಿದರು. ಸಹ ಪುರೋಹಿತರುಗಳು ಸಹಕರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆಯಾಯಿತು.