ಮಂಗಳೂರು:ವಿವಿಧ ಕಾಯಿಲೆಗಳ ಸಂದರ್ಭದಲ್ಲಿ ಎಂಆರ್ಐ ಸ್ಕ್ಯಾನ್ ಮಾಡಬೇಕಾದ ಸಂದರ್ಭದಲ್ಲಿ ರೋಗಿಗಳು ಪಡುವ ತೊಂದರೆ ಅಷ್ಟಿಷ್ಟಲ್ಲ. ಎಂಆರ್ಐ ಕೋಣೆಯಲ್ಲಿ ಬರುವ ಕರ್ಕಶ ಶಬ್ದವೇ ರೋಗಿಗಳಲ್ಲಿ ಕಿರಿಕಿರಿ ಮೂಡಿಸುತ್ತದೆ. ಮಂಗಳೂರಿನಲ್ಲಿ ಈ ಶಬ್ದವನ್ನು ಮರೆಮಾಚಿ ನೆಚ್ಚಿನ ವಿಡಿಯೋಗಳನ್ನು ನೋಡುತ್ತಲೆ ಎಂಆರ್ಐ ಸ್ಕ್ಯಾನ್ಗೆ ಒಳಗಾಗಬಹುದಾದ ಉಪಕರಣ ಬಂದಿದೆ.
ವಿಡಿಯೋ ನೋಡುತ್ತಲೆ ಎಂಆರ್ಐ ಸ್ಕ್ಯಾನ್ಗೆ ಒಳಗಾಗಬಹುದು ಮಂಗಳೂರಿನ ಕೊಡಿಯಾಲ್ ಬೈಲ್ನಲ್ಲಿರುವ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದು. ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹೊಸ ಎಂಆರ್ಐ ಸ್ಕ್ಯಾನ್ ಉಪಕರಣ ಬಂದಿದೆ. ಫಿಲಿಪ್ಸ್ ಇಂಜೇನಿಯಾ 1.5 ಟಿ ಎಂಆರ್ಐ ಸ್ಕ್ಯಾನ್ ಉಪಕರಣವನ್ನು ಇತ್ತೀಚೆಗೆ ಅಳವಡಿಸಲಾಗಿದ್ದು, ಇದು ಈವರೆಗೆ ಮಂಗಳೂರಿನಲ್ಲಿ ಇರುವ ಸುಧಾರಿತ ಎಂಆರ್ಐ ಸ್ಕ್ಯಾನರ್ ಇದಾಗಿದೆ. ಕೇರಳದಿಂದ ಗೋವಾವರೆಗೆ ಕರಾವಳಿಯಲ್ಲಿ ಈ ಎಂಆರ್ಐ ಸ್ಕ್ಯಾನರ್ನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಈ ಎಂಆರ್ಐ ಸ್ಕ್ಯಾನ್ ವಿಶೇಷತೆಯೆಂದರೆ ಎಂಆರ್ಐ ಸ್ಕ್ಯಾನ್ ಮಾಡಲು ಒಳಪ್ರವೇಶಿಸಿದ ವ್ಯಕ್ತಿ ತನ್ನಿಷ್ಟದ ವಿಡಿಯೋ ನೋಡಬಹುದು. ರೋಗ ಆಧರಿಸಿ ಎಂಆರ್ಐ ಸ್ಕ್ಯಾನ್ ಮಾಡಲು 20 ನಿಮಿಷದಿಂದ ಒಂದು ಗಂಟೆಯವರೆಗೆ ಸಮಯ ಬೇಕಾಗುತ್ತದೆ. ಈ ಸಂದರ್ಭಕ್ಕೆ ಬೇಕಾದ ವಿಡಿಯೋಗಳನ್ನು ಪೆನ್ಡ್ರೈವ್ನಲ್ಲಿ ತಂದರೆ ಆ ವಿಡಿಯೋವನ್ನು ಸ್ಕ್ಯಾನಿಂಗ್ ಮಾಡುವ ಅವಧಿಯಲ್ಲಿ ನೋಡಲು ಸಾಧ್ಯವಾಗುತ್ತದೆ.
ನಿಯಂತ್ರಣ ಕೊಠಡಿಯಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತದೆ. ಇದು ಎಂಆರ್ಐ ಯಂತ್ರದಲ್ಲಿ ಮಲಗಿರುವ ವ್ಯಕ್ತಿಗೆ ಮೇಲ್ಭಾಗದಲ್ಲಿ ಈ ವಿಡಿಯೋ ಕಾಣಲಿದ್ದು ಇದರ ಆಡಿಯೋವನ್ನು ರೋಗಿಯ ಕಿವಿಗೆ ಇಯರ್ ಪೋನ್ ಮೂಲಕ ನೀಡಲಾಗುತ್ತದೆ. ಇದರಿಂದ ಎಂಆರ್ಐ ಸ್ಕ್ಯಾನ್ ಮಾಡುವಾಗ ವಿಪರೀತ ಕಿರಿಕಿರಿ ಶಬ್ದ ಇಲ್ಲದಂತಾಗಿ ಬೇಕಾದ ವಿಡಿಯೋ ವನ್ನು ನೋಡಬಹುದಾಗಿದೆ. ಇದರ ಜೊತೆಗೆ ಎಂಆರ್ಐ ಸ್ಕ್ಯಾನಿಂಗ್ ರೂಂನ ಬಣ್ಣಗಳ ಬದಲಾವಣೆಯು ರೋಗಿಯಲ್ಲಿ ಹೊಸ ಅನುಭವ ನೀಡಲಿದೆ. ಈ ಉಪಕರಣದಿಂದ ಮಕ್ಕಳ ಎಂಆರ್ಐ ಸ್ಕ್ಯಾನ್ ಮಾಡಲು ಬಹಳಷ್ಟು ಅನುಕೂಲವಾಗಲಿದೆ.