ಮಂಗಳೂರು: ಸನಾತನ ಧರ್ಮದ ಬಗ್ಗೆ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು ಈ ಹೇಳಿಕೆಗಳನ್ನು ನಾನು ಗಮನಿಸಿಲ್ಲ. ಆದರೆ, ಎಲ್ಲಾ ಧರ್ಮಗಳಿಗೂ ಅದರದ್ದೇ ಆದ ಮಹತ್ವ, ಇತಿಹಾಸ, ಪಾವಿತ್ರ್ಯತೆಯಿದೆ. ನಾವು ನಮ್ಮ ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಪಾಲಿಸಿ ಇನ್ನಿತರ ಧರ್ಮಗಳನ್ನು ಗೌರವಿಸಬೇಕಾಗುತ್ತದೆ. ಎಲ್ಲಾ ಧರ್ಮಗಳು ಸಮಾಜ ಒಗ್ಗಟ್ಟು ಮಾಡಲು ಸಂದೇಶ ನೀಡುತ್ತದೆಯೇ ಹೊರತು ಬಿಕ್ಕಟ್ಟು ಮಾಡುವುದಿಲ್ಲ. ಎಲ್ಲಾ ಧರ್ಮಗಳು ಮಾನವೀಯತೆ, ಕರುಣೆ, ಪ್ರೀತಿ, ವಿಶ್ವಾಸ, ಕರುಣೆಯನ್ನು ಬೋಧಿಸಿ ಆತ್ಮವಿಶ್ವಾಸದ ಮೂಲಕ ಜೀವನ ನಡೆಸಲು ಅವಕಾಶ ಕೊಡುತ್ತದೆ. ಆದ್ದರಿಂದ ಒಂದಿಬ್ಬರು ಏನೋ ಮಾತನಾಡುತ್ತಾರೆ. ಅದಕ್ಕೆ ಅಷ್ಟೊಂದು ಮಹತ್ವ ನೀಡುವುದು ಬೇಡ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ವೇಳೆ ಗಣೇಶ ಕೂರಿಸುವ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಮಾತನಾಡಿದ ಅವರು, ಕಳೆದ 40ವರ್ಷಗಳಿಂದ ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಯಾವುದೇ ವಿದ್ಯಾಸಂಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣ, ಅಕಾಡೆಮಿಕ್ ಶಿಕ್ಷಣ ಹಾಗೂ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಕುಲಪತಿಗಳು ನಿರ್ಧಾರ ಕೈಗೊಳ್ಳಬೇಕು. ಹೊರಗಿನವರು ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಆದರೆ, ಕುಲಪತಿಗಳು ಅದು ಕಾನೂನುಬದ್ಧವಾಗಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ತಪ್ಪಿದ್ದಲ್ಲಿ ಸರಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದು ಸ್ಪೀಕರ್ ಖಾದರ್ ಹೇಳಿದರು.