ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಇಂದು ಭೇಟಿ ನೀಡಿದ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವನೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಬಗ್ಗೆ ಸರ್ಕಾರದ ಆದೇಶದಂತೆ ಯಾವ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು.
ದ.ಕ. ಎಸ್ಪಿ ಋಷಿಕೇಶ್ ಸೋನವನೆ ಓದಿ: ಕೊರೊನಾದಿಂದ ರಕ್ಷಿಸಿಕೊಳ್ಳಲು ಸ್ಟೀಮ್ ಮೊರೆ ಹೋದ ಶಿವಮೊಗ್ಗ ಪೊಲೀಸರು
ದ.ಕ ಜಿಲ್ಲೆಯಲ್ಲಿ ಕೊರೊನಾ ಸಂದರ್ಭ ಕೆಲವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಜಿಲ್ಲೆ ಹಾಗೂ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಗಳನ್ನು ಅಳವಡಿಸಿದ್ದೇವೆ. ಅಗತ್ಯ ಕೆಲಸಗಳಿಗೆ ಹೋಗುವವರಿಗೆ ಮಾತ್ರ ಅನುಮತಿ ಇದೆ. ಔಷಧಿಗಳು ಮತ್ತು ಮನೆಗೆ ಬೇಕಾದ ಅಗತ್ಯವಸ್ತುಗಳ ಖರೀದಿಗೆ ಹೋಗುವವರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.
ಸುಖಾಸುಮ್ಮನೆ ತಿರುಗಾಡುವವರಿಗೆ ಅವಕಾಶ ಇಲ್ಲ, ಅಂತವರಿಗೆ ದಂಡ ವಿಧಿಸುತ್ತೇವೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈವರೆಗೆ ಜಿಲ್ಲೆಯಾದ್ಯಂತ 600 ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದೇವೆ. ಕೊರೊನಾ ನಿಯಮ ಪಾಲಿಸದ 124 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಜನ ಪೊಲೀಸ್ ಸಿಬ್ಬಂದಿ ಕೊರೊನಾ ಕಾಯಿಲೆಗೆ ತುತ್ತಾಗಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, ಇಲಾಖೆ ಮಟ್ಟದಲ್ಲಿ ಅದರ ಬಗ್ಗೆ ಕಾರ್ಯಗಳು ನಡೆಯುತ್ತಿದೆ. ಇಲ್ಲಿ ನಮ್ಮ ಜಾಗ ಇದ್ದು, ಠಾಣೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಎಲ್ಲರೂ ಕೊರೊನಾ ಬಗ್ಗೆ ಸರ್ಕಾರದ ನಿಯಮಗಳನ್ನು ಪಾಲಿಸಿ ಅನಗತ್ಯವಾಗಿ ತಿರುಗಾಡಬೇಡಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಬನ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.