ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ನಿಧನ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರು ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡರ ಭೇಟಿ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ರಮನಾಥ ರೈ, ವಿನಯಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮೊದಲಾದವರು ಭೇಟಿ ನೀಡಿದರು.
ಇದನ್ನೂ ಓದಿ:ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ
ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ದಿಗ್ವಿಜಯ ಸಿಂಗ್ ಸೇರಿದಂತೆ ವಿವಿಧ ಮುಖಂಡರುಗಳು ಫರ್ನಾಂಡಿಸ್ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಸಂತಾಪ:
ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡಿದ್ದ ಅವರು, ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಅವರು ಕಾಂಗ್ರೆಸ್ ಹಿರಿಯ ಮುಖಂಡರೂ ಆಗಿದ್ದು, ಹಿಂದೆ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ನಳಿನ್‍ಕುಮಾರ್ ಅವರು ಸ್ಮರಿಸಿದ್ದಾರೆ. ಮೃತರ ಕುಟುಂಬಕ್ಕೆ ಅವರ ಅಗಲುವಿಕೆಯ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.