ಮಂಗಳೂರು:ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾ ನಗರ ಎಂಬಲ್ಲಿ ರತ್ನ ಶೆಟ್ಟಿ (60) ಮನೆಯ ಕೊಠಡಿಯೊಳಗೆ ಅಸಹಜವಾಗಿ ಸಾವನ್ನಪ್ಪಿದ್ದರು. ಕೊಲೆ ಆರೋಪದ ಮೇಲೆ ಆಕೆಯ ಮಗನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ರವಿರಾಜ್ ಶೆಟ್ಟಿ(33) ಬಂಧಿತ ಆರೋಪಿ.
ರತ್ನ ಶೆಟ್ಟಿ ಅವರು ಕಟೀಲು ದುರ್ಗಾ ನಗರದ ಬಾಲಕೃಷ್ಣ ಎಂಬವರ ಮನೆಯ ಬದಿಯ ಕೊಠಡಿಯಲ್ಲಿ ಮಗ ರವಿರಾಜ್ ಜೊತೆ ವಾಸ್ತವ್ಯವಿದ್ದರು. ಆತ ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣ ಎಂಬವರ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗಿರಲಿಲ್ಲ. ಈ ನಡುವೆ ಮಗ ರವಿರಾಜ್ ಶೆಟ್ಟಿ ತಾಯಿ ಜೊತೆ ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾನೆ.
ಭಾನುವಾರ ಬೆಳಗ್ಗೆ ಮನೆಯ ಪರಿಸರದಲ್ಲಿ ವಾಸನೆ ಬರುತ್ತಿರುವುದನ್ನು ಕಂಡು ಅನುಮಾನದಿಂದ ಮನೆಯವರು ಮಹಿಳೆ ವಾಸ್ತವ್ಯವಿದ್ದ ಕೊಠಡಿಯ ಕಿಟಕಿಯಲ್ಲಿ ನೋಡಿದಾಗ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಆರೋಪಿ ರವಿರಾಜ್ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಪ್ರಕರಣ - ಟವೆಲ್‌ನಿಂದ ಬಿಗಿದು ವೃದ್ಧೆಯ ಹತ್ಯೆ:ಮತ್ತೊಂದೆಡೆ, ಆಸ್ತಿ ವಿಚಾರ ಸಂಬಂಧಿಸಿದಂತೆ ಟವೆಲ್‌ನಿಂದ ಕುತ್ತಿಗೆ ಬಿಗಿದು ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ನಗರದ ಹೆಬ್ಬಾಳ ಸಮೀಪದ ಹೊರವಲಯದಲ್ಲಿ ಇತ್ತೀಚೆಗೆ ನಡೆದಿತ್ತು. ನಳಿನಿ ರಮೇಶ್(62) ಕೊಲೆಯಾದವರು. ಕಾಫಿ ಪುಡಿ ಅಂಗಡಿ - ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಪತ್ನಿಯಾಗಿರುವ ಮೃತ ನಳಿನಿ ಮಂಡ್ಯ ವಿದ್ಯಾ ನಗರದಲ್ಲಿ ವಾಸವಿದ್ದರು. ಉದ್ದಿಮೆ ಆರಂಭಿಸಲು ಕಾಫಿ ಪುಡಿ ಅಂಗಡಿ ಮತ್ತು ಚಿಕೋರಿ ಕಾರ್ಖಾನೆಯನ್ನು ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದ್ದರು.
ಆದರೆ, ಸಾಲ ತೀರಿಸಲಾಗದ ಕಾರಣ ಕಾರ್ಖಾನೆಯನ್ನು ಬ್ಯಾಂಕ್ ವಶಕ್ಕೆ ಪಡೆಯಲಾಗಿತ್ತು. ಮಂಡ್ಯ ಬಿಟ್ಟು ಮೈಸೂರಿನ ವೃದ್ಧಾಶ್ರಮದಲ್ಲಿ ವಾಸವಿದ್ದರು. ಇತ್ತೀಚೆಗೆ ವೃದ್ಧಾಶ್ರಮ ಬಿಟ್ಟು ವೃದ್ಧೆ ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ದುಷ್ಕರ್ಮಿಗಳು ಟವೆಲ್ ಬಳಸಿ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದರು. ಆಸ್ತಿಗಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್. ಯತೀಶ್ ಭೇಟಿ ನೀಡಿ, ಪರಿಶೀಲಿಸಿದ್ದರು. ವೃದ್ಧೆಯ ಶವವನ್ನು ಮಂಡ್ಯ ಮಿಮ್ಸ್ ಶವಾಗಾರಕ್ಕೆ ಕಳುಹಿಸಲಾಗಿತ್ತು. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ನಾಗರಹಾವು ಓಡಿಸಲು ಹಾಕಿದ ಹೊಗೆ ಆವರಿಸಿ ಹೊತ್ತಿ ಉರಿದ ಮನೆ.. ಎಲ್ಲ ಸರ್ವನಾಶ... ದಿಕ್ಕು ತೋಚದಾದ ಕುಟುಂಬ