ಉಳ್ಳಾಲ(ದಕ್ಷಿಣ ಕನ್ನಡ): ರಾಜ್ಯದ ಅತಿದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಇಂದು ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಮಧ್ಯಾಹ್ನದವರೆಗೆ ಶೇ.32ರಷ್ಟು ಮತದಾನ ನಡೆದಿದೆ. ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 23 ವಾರ್ಡ್‍ಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 50 ಅಭ್ಯರ್ಥಿಗಳು (25 ಪುರುಷ ಅಭ್ಯರ್ಥಿಗಳು, 25 ಮಹಿಳಾ ಅಭ್ಯರ್ಥಿಗಳು)ಕಣದಲ್ಲಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 22,502 ಮತದಾರರಿದ್ದಾರೆ.
ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಸೋಮೇಶ್ವರ ಗ್ರಾಮ ಪಂಚಾಯತ್ ಆಗಿದ್ದ ಸಂದರ್ಭ ಬಿಜೆಪಿ ಸುಮಾರು 30 ವರ್ಷಗಳ ಕಾಲ ತನ್ನ ಪ್ರಾಬಲ್ಯ ಸಾಧಿಸಿತ್ತು. 23 ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 22 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ವಾರ್ಡ್‍ನಲ್ಲಿ ಕಾಂಗ್ರೆಸ್, ಸಿಪಿಐಎಂ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ.
19 ವಾರ್ಡ್‍ಗಳಲ್ಲಿ 18 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ಒಂದು ವಾರ್ಡ್‍ನಲ್ಲಿ ಬಿಜೆಪಿ-ಸಿಪಿಐಎಂ ನಡುವೆ ಸ್ಪರ್ಧೆ ನಡೆಯಲಿದೆ. ಉಳಿದ ನಾಲ್ಕು ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಿಪಿಐಎಂ, ಎಎಪಿ, ಸೋಷಿಯಲ್ ವೆಲ್ಫೇರ್ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
6 ಶಾಲೆಗಳಲ್ಲಿ ಮತಗಟ್ಟೆ: ಸೋಮೇಶ್ವರ ಪುರಸಭೆ ವ್ಯಾಪ್ತಿಯ 6 ಶಾಲೆಗಳಲ್ಲಿ 23 ವಾರ್ಡ್‍ಗಳ ಮತದಾನ ನಡೆಯಲಿದೆ. ಕುಂಪಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪೌಢಶಾಲೆಯಲ್ಲಿ 8 ಮತದಾನ ಕೇಂದ್ರವಿದ್ದು, ಸ್ಟೆಲ್ಲಾ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1, ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5, ಆನಂದಾಶ್ರಮ, ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆನಂದಾಶ್ರಮ ಶಾಲೆಯಲ್ಲಿ ತಲಾ 2 ಮತದಾನ ಕೇಂದ್ರಗಳಿವೆ.