ಹೃದಯಾಘಾತದಿಂದ ನಿಧನರಾದ ಯೋಧನಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಕಡಬ (ದಕ್ಷಿಣ ಕನ್ನಡ):ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮಾಜಿ ಸೈನಿಕ ಜೋನಿ ಟಿ.ಕೆ ಅವರ ಪುತ್ರ ತಮಿಳುನಾಡಿನ ಮದ್ರಾಸ್ 20 ರಿಜಿಮೆಂಮೆಂಟ್ ಮತ್ತು ಕೊಲ್ಕತ್ತಾ ಯೂನಿಟ್‌ನಲ್ಲಿ ಯೋಧರಾಗಿದ್ದ ಲಿಜೇಶ್ ಕುರಿಯನ್ (30) ಮಾರ್ಚ್ 26 ರಂದು ತಮಿಳುನಾಡಿನ ಕೊಯಂಬತ್ತೂರುನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಂದೆ ಜೋನಿ, ತಾಯಿ, ಪತ್ನಿ ಜೋಮಿತಾ, ಒಂದು ವರ್ಷದ ಮಗುವನ್ನು ಅಗಲಿದ್ದಾರೆ.
ಇಂದು ಬೆಳಗ್ಗೆ ಯೋಧನ ಮೃತದೇಹವನ್ನು ತಮಿಳುನಾಡಿನಿಂದ ಆಂಬ್ಯುಲೆನ್ಸ್ ಮೂಲಕ ಕಡಬದ ರೆಂಜಿಲಾಡಿಯ ತರಪ್ಪೇಳ್‌ನ ಮನೆಗೆ ತಂದ ಬಳಿಕ ಕುಟ್ರುಪಾಡಿ ಸಂತ ಮೇರಿಸ್ ಕ್ಯಾಥೊಲಿಕ್ ಫೋರೋನಾ ಚರ್ಚ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಿಸಲಾಯಿತು. ನೂರಾರು ಜನರು ಯೋಧನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
19 ಕರ್ನಾಟಕ ಬೆಟಾಲಿಯನ್‌ನ ಎನ್‌ಸಿಸಿ, (ಸಿಎಚ್ಎಂ) ಚೇತನ್ ಗೌಡ, ಹವಾಲ್ದಾರ್ ಸಮರ್ದೀಪ್, ಹವಾಲ್ದಾರ್ ದಿಲ್ದಾರ್ ಸಿಂಗ್, ಹವಾಲ್ದಾರ್ ವಿಪಿನ್ ಕುಮಾರ್ ಮೊದಲಾದವರ ನೇತೃತ್ವದಲ್ಲಿ ಪಾರ್ಥಿವ ಶರೀರವನ್ನು ಸೇನಾ ಗೌರವಗಳೊಂದಿಗೆ ಚರ್ಚಿಗೆ ತಂದು ಗೌರವ ಸಲ್ಲಿಸಲಾಯಿತು. ನಂತರದಲ್ಲಿ ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆಪಿಎಂ ಚೆರಿಯನ್, ಪದಾಧಿಕಾರಿ ಟಿ.ಜಿ ಮ್ಯಾಥ್ಯೂ, ಮಹಿಳಾ ವೀರನಾರಿ ಘಟಕದ ಅಧ್ಯಕ್ಷೆ ಗೀತಾ, ಘಟಕದ ಪದಾಧಿಕಾರಿಗಳು, ಸದಸ್ಯರು ರಾಷ್ಟ್ರಧ್ವಜ ಹಾಕುವ ಮೂಲಕ ಸೈನಿಕನಿಗೆ ಗೌರವ ಸಲ್ಲಿಸಿದರು.
ಕಡಬ ತಾಲೂಕು ತಹಶೀಲ್ದಾರ್ ರಮೇಶ್ ಬಾಬು, ಕಡಬ ಠಾಣಾ ಪಿಎಸ್ಐ ಶಶಿಧರ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇಲಾಖಾ ಸಿಬ್ಬಂದಿ ಗೌರವ ಸಲ್ಲಿಸಿದರು. ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಕೊನೆಗೆ ಚರ್ಚ್‌ನ ವಂದನೀಯ ಧರ್ಮಗುರು ರೆ.ಜೋಸ್ ಆಯಂಕುಡಿ ನೇತೃತ್ವದಲ್ಲಿ ಪಾರ್ಥಿವ ಶರೀರದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಲಿಜೇಶ್ ಕಳೆದ 12 ವರ್ಷಗಳಿಂದ ಯೋಧರಾಗಿದ್ದು, ಪ್ರಸ್ತುತ ಇವರು ಕೊಯಂಬತ್ತೂರಿನಲ್ಲಿ ತಂದೆ, ತಾಯಿ, ಪತ್ನಿ ಮಗುವಿನೊಂದಿಗೆ ವಾಸವಿದ್ದರು. ಲಿಜೇಶ್ ಅವರು ಇದೇ ತಿಂಗಳ 30 ರಂದು ತನ್ನ ಮೂವತ್ತನೇ ಹುಟ್ಟುಹಬ್ಬವನ್ನು ಆಚರಿಸುವವರಿದ್ದರು.
ರೈಲ್ವೆ ಬೋಗಿಯ ಶೌಚಾಲಯದಲ್ಲಿ ಹೃದಯಾಘಾತದಿಂದ ಬ್ಯಾಂಕ್ ಮ್ಯಾನೇಜರ್ ಸಾವು: ಬೆಂಗಳೂರಿನಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ರೈಲ್ವೆ ಬೋಗಿಯಲ್ಲಿ ಶೌಚಾಲಯದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಮಾ.26ರಂದು ಘಟನೆ ನಡೆದಿತ್ತು. ಮೃತ ದುರ್ದೈವಿ ಅಶೋಕ್ ಚೌಧರಿ ಅವರು ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಸ್ಸೋಂ ಮೂಲದವರಾಗಿದ್ದ ಅಶೋಕ್ ಚೌಧರಿ ಅವರು ಅಸ್ಸೋಂ ನಿಂದ ಬೆಂಗಳೂರಿಗೆ ಬಂದಿದ್ದ ತಮ್ಮ ಹೆಂಡತಿ ಹಾಗೂ ಮಕ್ಕಳನ್ನು ಕರೆ ತರಲು ನಿನ್ನೆ ಬೆಳಗ್ಗೆ ಶಿವಮೊಗ್ಗ-ಯಶವಂತಪುರದ ಇಂಟರ್ಸಿಟಿ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದರು. ರೈಲಿನಲ್ಲಿಯೇ ಶೌಚಾಲಯಕ್ಕೆ ತೆರಳಿದ ಅಶೋಕ್ ಅವರು ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದಿದ್ದರು.
ಇದನ್ನೂ ಓದಿ:ಊರಿಗೆ ಬರಲು ಒಂದೇ ದಿನ ಬಾಕಿ ಇತ್ತು! ಹೃದಯಾಘಾತದಿಂದ ಮೃತಪಟ್ಟ ಮಂಗಳೂರಿನ ಯೋಧ