ಸುಳ್ಯ: ಕೆರೆ ಹಾವು ಅಟ್ಟಿಸಿಕೊಂಡು ಬಂದ ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯೊಳಗೆ ಸಿಲುಕಿಕೊಂಡ ಘಟನೆ ಸುಳ್ಯ ಸಮೀಪದ ಮರ್ಕಂಜದಲ್ಲಿ ನಡೆದಿದೆ.
ಬಲೆಯಲ್ಲಿ ಸಿಕ್ಕಿ ಬಿದ್ದ ಕೆರೆ ಹಾವು - ಕಾಳಿಂಗ ಸರ್ಪ: ಉರಗ ತಜ್ಞನಿಂದ ರಕ್ಷಣೆ - ಬಲೆಯಲ್ಲಿ ಸಿಕ್ಕಿ ಬಿದ್ದ ಕೆರೆ ಹಾವು-ಕಾಳಿಂಗ ಸರ್ಪ
ಸುಳ್ಯ ಸಮೀಪದ ಮರ್ಕಂಜದಲ್ಲಿ ಕೆರೆ ಹಾವನ್ನು ಅಟ್ಟಿಸಿಕೊಂಡು ಬಂದ ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಈ ವೇಳೆ ಉರಗ ತಜ್ಞ ಬಂದು ಎರಡು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟರು.
ಮರ್ಕಂಜದ ಆಕಿರೆಕಾಡು ಎಂಬಲ್ಲಿ ಸ್ಥಳೀಯರೊಬ್ಬರು ಬಾಳೆಗೊನೆಯ ರಕ್ಷಣೆಗಾಗಿ ಮೀನು ಹಿಡಿಯುವ ಬಲೆಯನ್ನು ಅಳವಡಿಸಿದ್ದರು. ಈ ವೇಳೆ ಜೀವ ರಕ್ಷಣೆಯೊಂದಿಗೆ ಓಡುತ್ತಿದ್ದ ಕೆರೆ ಹಾವು ಮತ್ತು ಕೆರೆ ಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ ಸರ್ಪ ಎರಡೂ ಒಂದೇ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದವು.
ತಕ್ಷಣ ಸ್ಥಳೀಯರು ಈ ಕುರಿತಂತೆ ಅರಂತೋಡು ಗ್ರಾಪಂ ಸದಸ್ಯ ಹಾಗೂ ಉರಗ ತಜ್ಞ ಶಿವಾನಂದ ಕುಕ್ಕುಂಬಳ ಎಂಬುವವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಬಲೆಯನ್ನು ಕತ್ತರಿಸಿ ಎರಡು ಹಾವುಗಳನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಾಗಿತ್ತು ಎನ್ನಲಾಗುತ್ತಿದೆ.