ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧ ದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿದ್ದು ಇಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಧರ್ಮದ ಸಾಕಾರ ಮೂರ್ತಿಯಾಗಿದ್ದು ಅವರ ಶಿಸ್ತು, ಸಮಯಪ್ರಜ್ಞೆ, ವಿನಯ, ಸೌಜನ್ಯ, ಸರಳತೆ ಹಾಗೂ ಉದಾತ್ತ ಚಿಂತನೆಗಳು ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಕೊಂಡಾಡಿದರು.
ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಎಲ್ಲರಿಗೂ ನಮಸ್ಕಾರ..' ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದರು. ಜನತಾ ಸೇವೆಯೇ ಜನಾರ್ದನ ಸೇವೆ ಎಂದು ನಿರಂತರ ಲೋಕ ಕಲ್ಯಾಣದ ಸೇವಾ ಕಾರ್ಯಗಳಲ್ಲಿ ನಿರತರಾದ ಹೆಗ್ಗಡೆಯವರ ಜೀವನವೇ ಧರ್ಮದ ಪ್ರತಿರೂಪವಾಗಿದೆ. ಜನಹಿತವೇ ರಾಷ್ಟ್ರದ ಹಿತ ಎಂಬ ನಿಸ್ವಾರ್ಥ ಭಾವನೆಯಿಂದ ಅವರು ಸೇವೆ ಮಾಡುತ್ತಿದ್ದಾರೆ. ಉತ್ತಮ ಸಂಸ್ಕಾರವೇ ನಿಜವಾದ ಧರ್ಮ. ಸರ್ವ ಧರ್ಮಗಳ ಸಾರವೂ ಒಂದೇ ಆಗಿದ್ದು, ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು, ಪ್ರೀತಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಧರ್ಮದ ಮರ್ಮವನ್ನರಿತು ಜಾಗೃತಿಗಾಗಿ ಜಾಗರಣೆ ಮಾಡಬೇಕು: ವೀರೇಂದ್ರ ಹೆಗ್ಗಡೆ