ಕರ್ನಾಟಕ

karnataka

ETV Bharat / state

ಸುಬ್ರಹ್ಮಣ್ಯಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ; ವಿದ್ಯಾರ್ಥಿಗಳೊಂದಿಗೆ ಸಂವಾದ - ಈಟಿವಿ ಭಾರತ ಕನ್ನಡ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.

smriti-irani-visited-kukke-temple
ಸ್ಮೃತಿ ಇರಾನಿ

By

Published : Dec 27, 2022, 10:57 PM IST

ವಿದ್ಯಾರ್ಥಿಗಳೊಂದಿಗೆ ಸಚಿವೆ ಸ್ಮೃತಿ ಇರಾನಿ ಸಂವಾದ

ಕುಕ್ಕೆ ಸುಬ್ರಹ್ಮಣ್ಯ/ದಕ್ಷಿಣ ಕನ್ನಡ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆ ಜಾರಿಗೆ ತರಲು ಉತ್ಸುಕಳಾಗಿದ್ದೇನೆ. ದೇವಳದಿಂದ ಈ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳಿಸಿ, ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಬಂದರೆ ಖಂಡಿತವಾಗಿಯೂ ಸ್ವದೇಶಿ ದರ್ಶನ್ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವೆ ದೇವಳದ ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಎಂಬ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಾಂಜಲಿ ಎನ್ನುವ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ನಾನು ಕೂಡಾ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಸೇವೆ ನೆರವೇರಿಸಿದ್ದೇನೆ. ನಾನು ಈ ಹಿಂದಿನಿಂದಲೂ ಇಲ್ಲಿಗೆ ಬರುವ ಚಿಂತನೆ ಮಾಡಿದ್ದೆ, ಇಂದು ಅದು ಈಡೇರಿದೆ. ಇದು ದೇವರ ಸಂಕಲ್ಪವಾಗಿದೆ. ಕ್ಷೇತ್ರ ಭೇಟಿಯಿಂದ ತುಂಬು ಸಂತಸವಾಗಿದೆ ಎಂದು ಸಚಿವೆ ತಿಳಿಸಿದರು.

ಒಬ್ಬ ನಟಿಯಾಗಿ ಮತ್ತು ರಾಜಕಾರಣಿಯಾಗಿ ತಾವು ತಮ್ಮ ಕರ್ತವ್ಯವನ್ನು ಯಾವ ರೀತಿ ನಿಭಾಯಿಸಿದ್ದೀರಿ? ಎಂಬುದಾಗಿ ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಳು, ಅದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತೆ. ಇದಲ್ಲದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದೇನೆ. ಅದೇ ರೀತಿ ನಟಿಯಾಗಿದ್ದಾಗಲೂ ನಾನು ಸಂಘದ ಮತ್ತು ವಿದ್ಯಾರ್ಥಿ ಪರಿಷತ್‌ನ ಸ್ವಯಂ ಸೇವಕಳಾಗಿ ಸೇವೆ ಸಲ್ಲಿಸುತ್ತಿದ್ದೆ. ಇವುಗಳು ನನಗೆ ಕರ್ತವ್ಯ ನಿರ್ವಹಣೆಗೆ ವಿಶೇಷ ಕೊಡುಗೆ ಮತ್ತು ಸ್ಥಿರ ಮನಸ್ಥಿತಿಯನ್ನು ನೀಡಿತ್ತು. ಪರೋಪಕಾರ, ದೇಶ ಸೇವೆ ಮತ್ತು ಜನತಾ ಸೇವೆಯ ಮಹತ್ವವನ್ನು ಆರ್‌ಎಸ್‌ಎಸ್‌ನಿಂದ ಕಲಿತುಕೊಂಡೆ ಎಂದು ನುಡಿದರು.

ಕನ್ನಿಕಾ ಕಳಿಗೆ ಎಂಬ ವಿದ್ಯಾರ್ಧಿನಿ ಮಹಿಳೆಯರಿಗೆ ಏನಾದರೂ ಸಮಸ್ಯೆಯಾದರೆ ಸಂಪರ್ಕ ಸಾಧಿಸಿ ಅದರಿಂದ ಮುಕ್ತಿ ಪಡೆಯಲು ಸರಕಾರದಿಂದ ಯಾವುದಾರೂ ಯೋಜನೆ ಇದೆಯಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಸಚಿವೆ, ನನ್ನ ಮೈಲ್ ಐಡಿ ಮತ್ತು ನನ್ನ ಪೋನ್ ನಂಬರ್ ನನ್ನ ವೆಬ್ ಸೈಟ್‌ನಲ್ಲಿ ಇದೆ. ಅದಕ್ಕೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುತ್ತೇನೆ. ಮಹಿಳೆಯರು ತಮಗೆ ಸಂಕಷ್ಠ ಎದುರಾದಾಗ ಹೆಲ್ಪ್​ಲೈನ್ ಸಂಖ್ಯೆ 1098ಗೆ ಕರೆ ಮಾಡಬಹುದು.

ಪ್ರತಿ ದಿನ ಸುಮಾರು 70 ಲಕ್ಷ ಕರೆಗಳು ಇದಕ್ಕೆ ಬರುತ್ತದೆ. ಇದಕ್ಕೆ ಸಮರ್ಪಕವಾಗಿ ಸ್ಪಂದನೆ ನೀಡಲಾಗುತ್ತದೆ. ಭಾರತದ ಎಲ್ಲಾ ಜಿಲ್ಲೆಗಳ ಕೇಂದ್ರ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಕೇಂದ್ರಗಳನ್ನು ಕೇಂದ್ರ ಸರಕಾರವು ಆರಂಭಿಸಿದೆ. ಈಗಾಗಲೇ ಸುಮಾರು 700ಕ್ಕೂ ಅಧಿಕ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಶಿಕ್ಷಣದ ಬಗ್ಗೆ ವಿದ್ಯಾರ್ಥಿಯೊಬ್ಬರು ಪ್ರಶ್ನೆಗೆ ಸಚಿವೆ ಉತ್ತರಿಸಿ, ನೂತನವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇಡೀ ಭಾರತಕ್ಕೆ ಒಂದೇ ತೆರನಾದ ಶಿಕ್ಷಣ ವ್ಯವಸ್ಥೆ ಹೊಂದಲು ಇದು ಸಹಕಾರಿಯಾಗಿದೆ. ಅಲ್ಲದೆ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಇದು ಅನುಕೂಲಕರವಾಗಿದೆ. ಮಾತೃಭಾಷಾದಲ್ಲಿ ಶಿಕ್ಷಣ ಪಡೆಯುವುದರಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನ ದೊರಕುತ್ತದೆ. ರಾಷ್ಟ್ರೀಯ ಶಿಕ್ಷಣ ಪದ್ದತಿಯಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣವನ್ನು ಕೂಡಾ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ. ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಪ್ರಥಮ ರಾಜ್ಯವಾಗಿದೆ. ಈ ದಿಸೆಯಲ್ಲಿ ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.

ವಿದ್ಯಾರ್ಥಿ ಹರೀಶ್ ಕುಮಾರ್ ಅವರು ಮುಂದಿನ ವರ್ಷ ಭಾರತದಲ್ಲಿ ಜಿ20 ಸಮ್ಮೇಳನ ಭಾರತದಲ್ಲಿ ನಡೆಯಲಿದೆ. ಇದರಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ ಬಗ್ಗೆ ಭಾರತ ತೆಗೆದುಕೊಳ್ಳುವ ನಿಲುವು ಏನು ಎಂದು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಸಚಿವೆ ಪ್ರಧಾನ ಮಂತ್ರಿಗಳು ವಸುದೇವ ಕುಟುಂಬ ಎಂಬ ಧ್ಯೇಯ ವ್ಯಾಖ್ಯೆಗೆ ತಕ್ಕುದಾಗಿ ನಡೆಯುವವರು. ಇದನ್ನು ಅವರು ಅನುಸರಿಸುತ್ತಾ ಬಂದಿದ್ದಾರೆ. ಮಹಿಳೆಯ ಸಾಮಾಜಿಕ ಉತ್ಥಾನಕ್ಕಾಗಿ ಬೇಕಾದ ಎಲ್ಲಾ ಯೋಜನೆಗಳನ್ನು ಭಾರತ ಸರಕಾರ ನಡೆಸಿದೆ. ಪ್ರಧಾನಿಗಳು ಇಂಡೋನೇಷ್ಯಾದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂಬುದಾಗಿ ಕರೆ ನೀಡಿದ್ದರು.

ಅದೇ ರೀತಿ ಭಾರತದಲ್ಲಿ ನಡೆಯುವ ಸಮ್ಮೇಳನದಲ್ಲಿ ಕೂಡಾ ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ ಎಲ್ಲಾ ರಾಷ್ಟ್ರಗಳೂ ಹೆಚ್ಚಿನ ಆಧ್ಯತೆ ನೀಡಬೇಕು ಎಂಬ ಭಾರತದ ನಿಲುವನ್ನು ಪ್ರಸ್ತಾಪಿಸಲಿದೆ. ಮಹಿಳೆಯರಿಗಾಗಿ ಮುದ್ರಾ ಯೋಜನಾ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಔದ್ಯಮಿಕ ಕ್ಷೇತ್ರದಲ್ಲಿ ಮಹಿಳೆಯರು ಬಂಡವಾಳ ಹೂಡಲು ಹೆಚ್ಚಿನ ಸಾಲ ಸೌಲಭ್ಯವನ್ನು ಮಹಿಳೆಯರಿಗೆ ಒದಗಿಸುವ ಯೋಜನೆಯನ್ನು ಕೇಂದ್ರ ಸರಕಾರ ಒದಗಿಸಿದೆ. ಈ ಎಲ್ಲಾ ಕಾರಣದಿಂದ ಭಾರತದ ಮಹಿಳೆಯರು ಸಬಲರಾಗಿ ತನ್ನ ಕಾಲ ಮೇಲೆ ತಾನು ನಿಂತು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಈ ವಿಷಯವನ್ನು ಕೂಡಾ ಜಿ20 ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ನುಡಿದರು.

ಇದನ್ನೂ ಓದಿ:ಡಿ.30, 31ರಂದು ಅಮಿತ್ ಶಾ ರಾಜ್ಯ ಪ್ರವಾಸ: ಕಾರ್ಯಕ್ರಮಗಳ ವಿವರ ಇಲ್ಲಿದೆ..

ABOUT THE AUTHOR

...view details