ಮಂಗಳೂರು: ನಗರದಲ್ಲಿ ನಡೆಯುತ್ತಿದ್ದ ಸ್ಮಾರ್ಟ್ ಸಿಟಿ ಕಾಮಗಾರಿ ಹೈಕೋರ್ಟ್ ಆದೇಶದ ಹಿನ್ನೆಲೆ ಕಳೆದ ಎರಡು ತಿಂಗಳಿಂದ ಸ್ತಬ್ಭವಾಗಿದ್ದು, ಇದೀಗ ಮತ್ತೆ ಸಮ್ಮತಿ ನೀಡಿದ ಹಿನ್ನೆಲೆ ಕೆಲಸ ಆರಂಭವಾಗಿದೆ.
ಪಚ್ಚನಾಡಿ ತ್ಯಾಜ್ಯ ದುರಂತದ ಹಿನ್ನೆಲೆ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್, ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಉತ್ಪತ್ತಿಯಾಗುವ ತ್ಯಾಜ್ಯ ಸಂಬಂಧ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್ ಸ್ಮಾರ್ಟ್ ಸಿಟಿ ಕಾಮಗಾರಿಗೆ ತಡೆಯಾಜ್ಞೆ ನೀಡಿದ ಕೆಲವೇ ದಿನಗಳ ಹಿಂದೆ ಮಂಗಳೂರು ಹೃದಯ ಭಾಗದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ಕಾರಣದಿಂದ ವಾಹನ ಸಂಚಾರ ಮಾರ್ಪಾಟು ಮಾಡಿ ಆದೇಶಿಸಲಾಗಿತ್ತು. ಆದರೆ ಕಾಮಗಾರಿ ಆರಂಭಿಸಿದ ಕೆಲವೇ ದಿನಗಳಲ್ಲಿ ಬಂದ ತಡೆಯಾಜ್ಞೆ ಆದೇಶದಿಂದ ನಗರದ ಹೃದಯ ಭಾಗದ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆ ಆಗಿತ್ತು.
ಓದಿ:ಮಲೆನಾಡಿನಲ್ಲಿ ಪವರ್ ಸ್ಟಾರ್: ಶ್ರೀರಾಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಪುನೀತ್
ನಗರದಲ್ಲಿ ಯಾವುದೇ ಕಾಮಗಾರಿ ನಡೆಯುವುದಿದ್ದರೂ ಮಳೆಗಾಲದ ಒಳಗೆ ಪೂರ್ಣವಾಗಬೇಕು. ಇದನ್ನು ಲೆಕ್ಕಾಚಾರ ಮಾಡಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ನಗರದಲ್ಲಿ ಆರಂಭಿಸಲಾಗಿತ್ತು. ಆದರೆ ಕೋರ್ಟ್ನಿಂದ ತಡೆಯಾಜ್ಞೆ ಬಂದಿದ್ದರಿಂದ ಲೆಕ್ಕಾಚಾರ ತಲೆಕೆಳಗಾಗಿತ್ತು. ಇದೀಗ ಹೈಕೋರ್ಟ್ ಕಾಮಗಾರಿಗೆ ಪುನಃ ಸಮ್ಮತಿ ನೀಡಿರುವುದರಿಂದಾಗಿ ಇನ್ನೆರಡು ತಿಂಗಳಲ್ಲಿ ಸುರಿವ ಮಳೆಗೂ ಮುಂಚೆ ಕಾಮಗಾರಿ ಪೂರ್ಣಗೊಳಿಸುವ ಸವಾಲು ಎದುರಾಗಿದೆ.