ಮಂಗಳೂರು: ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ಹಾಗೂ ಸ್ಮಾರ್ಟ್ ಸಿಟಿ ಹಣ ಪೋಲು ಮಾಡುತ್ತಿರುವ ಬಿಜೆಪಿ ಸರ್ಕಾರದ ನೀತಿಯನ್ನು ವಿರೋಧಿಸಿ ಮಾಜಿ ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕ್ಯೂಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸಿದರು.
ಸ್ಮಾರ್ಟ್ ಸಿಟಿ ಹಣ ಪೋಲು: ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಇನ್ನಿತರ ಯೋಜನೆಗಳನ್ನು ಜೋಡಿಸಿ ಕಳೆದ ಆರು ತಿಂಗಳಿನಿಂದ ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಆರಂಭದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಗೆ ಅಂದಾಜು ಪಟ್ಟಿ ಮಾಡಲಾಗಿತ್ತು. ಇದೀಗ 12.50 ಕೋಟಿ ರೂ.ಗೆ ಟೆಂಡರ್ ಕರೆದು ಅನುಷ್ಠಾನ ಮಾಡಲಾಗಿದೆ. ಕಾಮಗಾರಿಯ ಅಂದಾಜು ಪಟ್ಟಿ ದಿಢೀರನೇ ಏರಿಕೆಯಾಗಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಸ್ಮಾರ್ಟ್ ಸಿಟಿ ಹಣ ಈ ರೀತಿಯಲ್ಲಿ ಪೋಲು ಮಾಡೋದು ಸರಿಯಲ್ಲ ಎಂದು ಆಗ್ರಹಿಸಿದರು.
ಕದ್ರಿ ಪಾರ್ಕ್ ಪ್ರವಾಸ ತಾಣವಾಗಿ ಜನರ ವಿಹಾರಕ್ಕೆ, ಚಿಕ್ಕ ಮಳಿಗೆಗಳ ಮೂಲಕ ವ್ಯಾಪಾರಿ ಉದ್ದೇಶಕ್ಕೆ, ಮನೋರಂಜನಾ ಉದ್ದೇಶಕ್ಕಾಗಿ ವಿನಿಯೋಗವಾಗಬೇಕೆ ಹೊರತು ರಸ್ತೆ ಮಾಡಿ ವಾಹನಗಳು ಓಡಾಡುವಂತಹ ಸ್ಥಳವಲ್ಲ. ಆದರೆ ಬಿಜೆಪಿಗರು ರಾಷ್ಟ್ರೀಯ ಹೆದ್ದಾರಿಯಂತೆ ಕಾಂಕ್ರೀಟ್ ರಸ್ತೆ ಮಾಡಿ ಮೂಲ ಉದ್ದೇಶವನ್ನು ಹಾಳುಗೆಡುವುತ್ತಿದ್ದಾರೆ. ಕದ್ರಿ ಪಾರ್ಕನ್ನು ಅಭಿವೃದ್ಧಿ ಮಾಡಲಿ. ಪಾರ್ಕ್ ಒಳಗಡೆ ಸಂಗೀತ ಕಾರಂಜಿ ಮಾಡಿ ಉದ್ಘಾಟಿಸಿ ಉತ್ತಮವಾಗಿ ನಡೆಯುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ. ಬಹಳಷ್ಟು ವರ್ಷಗಳಿಂದ ಹಾಳು ಬಿದ್ದಿರುವ ಪುಟಾಣಿ ರೈಲನ್ನು ಅಭಿವೃದ್ಧಿ ಮಾಡಲಾಗಿತ್ತು. ಅದಕ್ಕೆ ಇಂದಿನವರೆಗೂ ಚಾಲನೆ ದೊರಕಿಲ್ಲ. ಇಂತಹ ಮೂಲಭೂತ ಸೌಕರ್ಯಗಳಿಗೆ ವ್ಯವಸ್ಥೆ ಮಾಡಬೇಕೇ ಹೊರತು ರಸ್ತೆ ಕಾಮಗಾರಿ ಅವಶ್ಯಕತೆ ಇಲ್ಲ ಎಂದರು.
ರಸ್ತೆ ಕಾಮಗಾರಿ ಸಾಕಷ್ಟು ವಿಳಂಬವಾಗಿ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಾಹನಗಳು ಪಾರ್ಕ್ ಮಾಡಲು ಇಂಟರ್ಲಾಕ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ರಸ್ತೆಗಿಂತ ಸಾಕಷ್ಟು ಎತ್ತರ ಇರುವ ಪಾರ್ಕಿಂಗ್ ಸ್ಥಳವನ್ನು ತಗ್ಗಿಸೋದು ಹೇಗೆ ಎಂದು ತಿಳಿಯುತ್ತಿಲ್ಲ. ಇದೊಂದು ಸಂಪೂರ್ಣ ವಿಫಲ ಹಾಗೂ ದೂರದೃಷ್ಟಿ ಇಲ್ಲದ ಯೋಜನೆ. ಈ ರೀತಿ ಸ್ಮಾರ್ಟ್ ಸಿಟಿ ಯೋಜನೆಯ ಹಣ ಪೋಲಾಗುತ್ತಿದೆ ಎಂದು ಜೆ.ಆರ್.ಲೋಬೊ ಆರೋಪಿಸಿದ್ದಾರೆ.