ಮಂಗಳೂರು:ಕೋವಿಡ್-19 ಸೋಂಕಿನ ಭೀತಿಯಿಂದ ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಪರಿಣಾಮ ಶಿಕ್ಷಕರು ಆದಾಯವಿಲ್ಲದೆ ಅತಂತ್ರರಾಗಿದ್ದು, ಸರ್ಕಾರ ಈ ಕೂಡಲೇ ತಿಂಗಳಿಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಬೇಕು ಎಂದು ಮಂಗಳೂರು ವಿವಿ ಶೈಕ್ಷಣಿಕ ಪರಿಷತ್ನ ಮಾಜಿ ಸದಸ್ಯ ಅಭಿಷೇಕ್ ಉಳ್ಳಾಲ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ ಉಳ್ಳಾಲ್, ಸರ್ಕಾರದಲ್ಲಿ ಹಣ ಇಲ್ಲದಿದ್ದಲ್ಲಿ ರಿಸರ್ವ್ ಬ್ಯಾಂಕ್ನಿಂದ ಪಡೆಯುವ ಸಾಲದಲ್ಲಿ ಸ್ವಲ್ಪ ಹಣವನ್ನು ಶಿಕ್ಷಕರಿಗೆ ಮೀಸಲಿರಿಸಲಿ. ಎಲ್ಲವೂ ಸರಿಯಾದ ಬಳಿಕ ಆ ಹಣವನ್ನು ಶಿಕ್ಷಕರ ಸಂಬಳದಿಂದ ತಿಂಗಳು ತಿಂಗಳು ಕಡಿತಗೊಳಿಸಲಿ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳಿಂದ ಕಳೆದ ಐದಾರು ತಿಂಗಳಿನಿಂದ ಸಂಬಳ ಬಾರದ ಹಿನ್ನೆಲೆಯಲ್ಲಿ ಕೆಲ ಶಿಕ್ಷಕರು ಕೂಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಶಿಕ್ಷಣ ಸಂಸ್ಥೆಗಳು ಸಂಬಳ ಕೊಡಲು ಸಾಧ್ಯವಿಲ್ಲವೆಂದು ಶಿಕ್ಷಕರನ್ನು ಕೆಲಸದಿಂದ ತೆಗೆದಿದ್ದಾರೆ. ಇದರಿಂದ ಅವರ ಕುಟುಂಬದ ಪರಿಸ್ಥಿತಿ ಶೋಚನೀಯವಾಗಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಸಂಬಳ ನೀಡಲು ಸಹಕಾರಿಯಾಗುವಂತೆ, ಪೋಷಕರು ಒಟ್ಟಿಗೆ ಅಲ್ಲದಿದ್ದರೂ ಹಂತ-ಹಂತವಾಗಿಯಾದರೂ ಶಾಲಾ ಕಾಲೇಜು ಶುಲ್ಕವನ್ನು ಪಾವತಿಸಲಿ ಎಂದು ತಿಳಿಸಿದರು.
ಗಾಂಜಾ, ಡ್ರಗ್ಸ್ ಮಾಫಿಯಾ ಬಗ್ಗೆ ದಿನವಿಡೀ ಸುದ್ದಿ ಬಿತ್ತರಿಸುವ ಸುದ್ದಿ ಮಾಧ್ಯಮಗಳು ಸರ್ಕಾರದ ಗಮನ ಸೆಳೆಯಲು ಶಿಕ್ಷಕರ ಕಷ್ಟಕಾರ್ಪಣ್ಯಗಳ ಬಗ್ಗೆಯೂ ಸುದ್ದಿ ಮಾಡಬೇಕಾಗಿದೆ. ಶಿಕ್ಷಕ ವೃತ್ತಿಗೆ ಬರಲು ಸಾಕಷ್ಟು ಪರಿಶ್ರಮ ಪಟ್ಟು, ನೆಟ್, ಸ್ಲೆಟ್, ಪಿಎಚ್ಡಿ ಎಂದು ವಿವಿಧ ಹಂತ ದಾಟಿ, ಸಾಲ-ಸೂಲ ಮಾಡಿ ಬಂದಿರುತ್ತಾರೆ. ಆದರೂ ಸಂಬಳ ಭದ್ರತೆ, ಉದ್ಯೋಗ ಭದ್ರತೆ ಮಾತ್ರ ನಿಶ್ಚಿತವಿಲ್ಲ. ಹಾಗಾಗಿ ಸರ್ಕಾರ ಎಲ್ಲಾ ಶಿಕ್ಷಕರ ಡಾಟಾ ಸ್ಟೋರೇಜ್ ತಯಾರಿ ಮಾಡಿ ಅದರಲ್ಲಿ ಶಿಕ್ಷಕರ ಸಂಪೂರ್ಣ ವಿವರಗಳನ್ನು ಅಪ್ಲೋಡ್ ಮಾಡಬೇಕು. ಈ ಮೂಲಕ ಶಿಕ್ಷಕರ ಸಮಸ್ಯೆ ನಿವಾರಣೆಗೆ ಈ ಡಾಟಾ ಸ್ಟೋರೇಜ್ ವೇದಿಕೆಯಾಗಲಿದೆ ಎಂದು ಹೇಳಿದರು.
ಅಲ್ಲದೇ ರಾಜ್ಯದ ಶೇ.70 ರಷ್ಟು ಕಾಲೇಜುಗಳಲ್ಲಿ ಪ್ರಾಂಶುಪಾಲರ ನೇಮಕಾತಿಯಾಗಿಲ್ಲ. ಸಾಕಷ್ಟು ಕಾಲೇಜುಗಳಲ್ಲಿ ಕೇವಲ ಒಂದು ವರ್ಷ ಎರಡು ವರ್ಷಕ್ಕೆ ಇನ್ ಚಾರ್ಜ್ ಪ್ರಾಂಶುಪಾಲರು ಮಾತ್ರ ಇದ್ದಾರೆ. ಸರ್ಕಾರಕ್ಕೆ ತಕ್ಷಣಕ್ಕೆ ನೇಮಕಾತಿ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಇನ್ ಚಾರ್ಜ್ ಪ್ರಾಂಶುಪಾಲರನ್ನೇ ಪೂರ್ಣಪ್ರಮಾಣದ ಪ್ರಾಂಶುಪಾಲರಾಗಿ ನೇಮಕ ಮಾಡಲಿ. ಆನ್ಲೈನ್ ಪಾಠ ಮಾಡುವ ಶಿಕ್ಷಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಸಂಸ್ಥೆ ಯಾವುದೇ ಮುಲಾಜಿಲ್ಲದೆ ಶಾಲೆಯಿಂದ ಡಿಬಾರ್ ಮಾಡಲಿ ಎಂದು ಅಭಿಷೇಕ್ ಉಳ್ಳಾಲ್ ಆಗ್ರಹಿಸಿದರು.