ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ: ಹಕ್ಕುಚ್ಯುತಿ ಆರೋಪ- ಡಿಸಿ ಕಚೇರಿಯೆದುರು ಬಿಜೆಪಿ ಶಾಸಕರ ಧರಣಿ - district collector office

ಶಾಸಕರ ಹಕ್ಕುಚ್ಯುತಿ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸೋಮವಾರ ಶಾಸಕರು ಧರಣಿ ನಡೆಸಿದರು.

BJP
ಶಾಸಕರ ಹಕ್ಕುಚ್ಯುತಿ ಆರೋಪ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ಶಾಸಕರ ಧರಣಿ

By

Published : Aug 14, 2023, 4:17 PM IST

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ, ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯರಾದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ ನಾಯಕ್ ಧರಣಿಯಲ್ಲಿ ಪಾಲ್ಗೊಂಡಿದ್ದರು.

''ಮೂಡಬಿದಿರೆಯ ಇರುವೈಲು ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮ ರದ್ದುಪಡಿಸಿ ಇರುವೈಲು ಗ್ರಾಮ ಪಂಚಾಯತ್ ಪಿಡಿಒ ಮತ್ತು ಮೂಡಬಿದಿರೆ ತಾಲ್ಲೂಕು ಇಒ ಅವರನ್ನು ಅಮಾನತು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಸಭೆಯಲ್ಲಿ ಈ ವಿಚಾರವನ್ನು ಉಮನಾಥ ಕೋಟ್ಯಾನ್ ಗಮನಕ್ಕೆ ತಂದಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ ಅವರು ಶಿಷ್ಟಾಚಾರ ಉಲ್ಲಂಘಿಸದಂತೆ ಅಧಿಕಾರಿಗಳಿಗೆ ತಿಳಿಹೇಳಿ ಅಮಾನತು ವಾಪಸ್ ‌ಪಡೆಯುವಂತೆ ಸೂಚಿಸಿದ್ದರು. ಮುಖ್ಯಮಂತ್ರಿ ಈ ಸೂಚನೆ ನೀಡಿ ಎರಡು ವಾರವಾದರೂ ಅಮಾನತು ಆದೇಶ ವಾಪಸ್ ಪಡೆದಿಲ್ಲ. ಬಳಿಕ ಕಚೇರಿ ಕಟ್ಟಡವನ್ನು ಉದ್ಘಾಟಿಸಲು ಹೋಗಿದ್ದ ಶಾಸಕ ಉಮನಾಥ ಕೋಟ್ಯಾನ್ ಅವರನ್ನು ಪೊಲೀಸ್ ಸರ್ಪಗಾವಲು ಮೂಲಕ ತಡೆಯಲು ಯತ್ನಿಸಲಾಗಿತ್ತು'' ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

''ಇದೇ ರೀತಿಯ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್​ನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮ ರದ್ದುಪಡಿಸಲಾಗಿತ್ತು. ಆದರೆ, ಆಮಂತ್ರಣ ಪತ್ರಿಕೆಯಲ್ಲಿ ಕಾಂಗ್ರೆಸ್​ನ ಇಬ್ಬರು ವಿಧಾನಪರಿಷತ್ ಸದಸ್ಯರ ಹೆಸರು ಮೇಲೆ ಕೆಳಗೆ ಆಗಿದೆ ಎಂದು ಈ ಕಾರ್ಯಕ್ರಮ ರದ್ದುಪಡಿಸಲಾಗಿತ್ತು'' ಎಂದು ಬಿಜೆಪಿ ನಾಯಕರು ಆರೋಪಿಸಿದರು. ಇತ್ತೀಚೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಅಡ್ಡಿಪಡಿಸಿ ಚುನಾವಣೆ ವಿಳಂಬವಾಗಿ ನಡೆಯುವಂತೆ ಮಾಡಿದ್ದರು ಎಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯೆ:ಬಿಜೆಪಿ ಶಾಸಕರ ಧರಣಿ ವೇಳೆ ಸ್ಥಳಕ್ಕೆ ಬಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ''ಮುಂದೆ ಶಿಷ್ಟಾಚಾರ ಗೊಂದಲವಾಗದಂತೆ ದ.ಕ ಜಿಲ್ಲಾಧಿಕಾರಿ ಕಚೇರಿಯಿಂದ ಆಹ್ವಾನ ಪತ್ರಿಕೆ ಮುದ್ರಿಸಿ ಅನುಮೋದನೆ ಪಡೆಯುವಂತೆ ಆದೇಶ ಮಾಡಲಾಗಿದೆ. ಇರುವೈಲು ಗ್ರಾಮ ಪಂಚಾಯತ್ ನೂತನ ಕಚೇರಿಯಲ್ಲಿ ಇಂದಿನಿಂದಲೇ ಕರ್ತವ್ಯ ಆರಂಭಿಸುವಂತೆ ಸೂಚಿಸಲಾಗುವುದು. ಅಮಾನತು ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯಲಾಗುವುದು'' ಎಂದು ಭರವಸೆ ನೀಡಿದರು. ಬಳಿಕ ಧರಣಿ ಮುಕ್ತಾಯಗೊಳಿಸಲಾಯಿತು.

ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ:ಧರಣಿ ಕೈ ಬಿಟ್ಟ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ''ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡ್ತಾ ಇದೆ. ಶಾಸಕರ ಹಕ್ಕುಗಳ ಚ್ಯುತಿ ಮಾಡುವ ಕೆಲಸ ಆಗ್ತಿದೆ. ಒಂದು ಪಕ್ಷದ ಕೆಲ ನಾಯಕರ ಮಾತು ಕೇಳಿ ಚ್ಯುತಿ ಮಾಡಲಾಗ್ತಿದೆ. ಮೂಡಬಿದಿರೆಯ ಇರುವೈಲ್ ಹಾಗೂ ಬಂಟ್ವಾಳದಲ್ಲಿ ಘಟನೆ ನಡೆದಿದೆ. ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ಆಮಂತ್ರಣ ಕೊಟ್ಟಿದ್ದಾರೆ. ಆದರೆ ಡಿಸಿ ಕಚೇರಿಯಿಂದ ಏಕಾಏಕಿ ಕಾರ್ಯಕ್ರಮ ರದ್ದು ಮಾಡಲಾಗಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರ ಹೆಸರಿಲ್ಲ ಅಂತ ರದ್ದು ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಹಾಕಲಾಗಿದೆ. ಸ್ಪೀಕರ್, ವಿಧಾನ ಪರಿಷತ್ ಸದಸ್ಯರ ಹೆಸರೂ ಇತ್ತು. ಬಿಜೆಪಿಯ ಆರೂ ಶಾಸಕರ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡಲಾಗ್ತಿದೆ. ಜಿಲ್ಲಾಧಿಕಾರಿಗಳು ಇವತ್ತು ಬಂದು ಭರವಸೆ ಕೊಟ್ಟು ವಿನಂತಿ ಮಾಡಿದ್ದಾರೆ. ಹೀಗಾಗಿ ನಾವು ಈಗ ಧರಣಿ ವಾಪಸ್ ತೆಗೋತಿವಿ. ಇವತ್ತು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯಬೇಕು. ಇಲ್ಲದೇ ಇದ್ದರೆ ನಾವು ನಾಳೆ ಮತ್ತೆ ಪ್ರತಿಭಟನೆ ಮಾಡ್ತೇವೆ" ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ದೇಶ ವಿಭಜನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

ABOUT THE AUTHOR

...view details