ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೇಸರೀಕರಣ ಸಹಿಸುವುದಿಲ್ಲ ಎಂದು ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿ, ಸಂವಿಧಾನಾತ್ಮಕವಾಗಿ ನಡೆಯುವ ಎಲ್ಲ ಇಲಾಖೆಯಲ್ಲಿ ಪ್ರತಿಯೊಬ್ಬ ನಾಗರಿಕನು ಆತನ ಧರ್ಮವನ್ನು ಪಾಲಿಸಲು ಅವಕಾಶವಿದೆ. ಕಳೆದ 16 ವರ್ಷಗಳಲ್ಲಿ ಎಲ್ಲ ಇಲಾಖೆಗಳಲ್ಲೂ ಧಾರ್ಮಿಕ ಆಧಾರದಲ್ಲಿ ಪೂಜೆಗಳನ್ನು ಮಾಡಿಕೊಂಡು ಬಂದಿರುವುದನ್ನು ನಾವು ಕಂಡಿದ್ದೇವೆ. ಇದನ್ನು ತಡೆಯುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಅವರ ಹೀನ ರಾಜಕಾರಣ, ಸಿದ್ದರಾಮಯ್ಯ ಅವರ ಮಾನಸಿಕತೆ ಇದರಿಂದ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಒಬ್ಬ ಸಿಎಂ ಸಾಂವಿಧಾನಿಕವಾಗಿ ಜನರ ಧಾರ್ಮಿಕ ಆಚರಣೆಗೆ ಅಡ್ಡಿ ಬರೋದು ಸರಿಯಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪೂಜೆಗಳನ್ನು ಕೆಲವು ಇಲಾಖೆಗಳಲ್ಲಿ ಮಾಡುತ್ತಾರೆ. ನಂಬಿಕೆಗಳ ಆಧಾರದಲ್ಲಿ ಕೆಎಸ್ಆರ್ಟಿಸಿ, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡಲಾಗುತ್ತದೆ. ಇಂತಹ ಪೂಜೆಗಳನ್ನು ನಿಷೇಧಿಸುವ, ಬಹಿಷ್ಕಾರ ಹಾಕುವ ಕ್ರಮ ಸರಿಯಲ್ಲ. ಪೂಜೆ ಮಾಡುವ ಪೊಲೀಸರನ್ನು ಒಂದು ಪಾರ್ಟಿಗೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್ನಿಂದ ಆಗುತ್ತಿದೆ ಎಂದರು.
ಇದನ್ನೂ ಓದಿ:ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ
ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕುವ ವಿಚಾರದಲ್ಲಿ ಮಾತನಾಡಿದ ಅವರು, ಈ ಮೂಲಕ ಬಜರಂಗದಳವನ್ನು ನಿಷೇಧವನ್ನು ಉಲ್ಲೇಖಿಸುತ್ತಿದ್ದಾರೆ. ಇದು ಕಾಂಗ್ರೆಸ್ ಹಿಂದೂ ಸಮಾಜದ ಮೇಲೆ, ಹಿಂದೂ ಆಚರಣೆ ಹಾಗೂ ರಾಷ್ಟ್ರಭಕ್ತ ಕಾರ್ಯಕರ್ತರ ಮೇಲೆ ಹೇಗೆ ಸವಾರಿ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಇಂಥದ್ದರ ವಿರುದ್ಧ ಹೋರಾಟ ಮಾಡಿ ಉತ್ತರ ಕೊಡುವ ಶಕ್ತಿ ಬಿಜೆಪಿಗಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮಾನಸಿಕತೆಯನ್ನು ವಿರೋಧಿಸುತ್ತೇನೆ. ಸಂಘಟನೆ ಕಾರ್ಯಗಳಿಗೆ ಕೈ ಹಾಕಿದರೆ ನಾವು ಉತ್ತರ ಕೊಡುತ್ತೇವೆ ಎಂದರು.
ನಾವು ಹಿಂದೂಗಳ ಪರವಾಗಿದ್ದೇವೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧದ ಪರವಾಗಿದ್ದೇವೆ. ಹಿಂದೂ ಸಮಾಜಕ್ಕೆ ತೊಂದರೆಯಾದಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಇವರು ಸರ್ಕಾರ ಬರುವ ಮೊದಲೇ ಜಗಳ ಮಾಡಿಕೊಂಡು ಬಂದವರು. ಜನಾಶೀರ್ವಾದ ಸಿಕ್ಕರೂ ಇವರ ಬೀದಿ ಜಗಳ ಜೋರಾಗಿದೆ. ಇನ್ನೂ ಮಂತ್ರಿ ಮಂಡಲ ರಚನೆ ಆಗಿಲ್ಲ, ಇದು ರಚನೆ ಆದ್ರೆ ಕಾಂಗ್ರೆಸ್ನ ಸ್ಥಿತಿ ಏನಾಗುತ್ತೆ, ಕಾದು ನೋಡಿ. ನಮ್ಮ ಸರಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಹೊರಿಸಿರುವ ಇವರು ಅದನ್ನು ತನಿಖೆ ಮಾಡಲಿ. ಜೊತೆಗೆ ಸಿದ್ದರಾಮಯ್ಯ ವಿರುದ್ಧ ನಾವು ಲೋಕಾಯುಕ್ತಕ್ಕೆ ಕೊಟ್ಟ ದೂರಿನ ತನಿಖೆಯೂ ಆಗಲಿ ಎಂದು ಹೇಳಿದರು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು, ಕೇಸರೀಕರಣ, ನೈತಿಕ ಪೊಲೀಸ್ ಗಿರಿ ವಿರುದ್ಧ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಅದಲ್ಲದೆ ಡಿಸಿ ಹಾಗೂ ಸಿಇಒ ಗಳಿಗೂ ಸಭೆ ನಡೆಸಿ, ಜನಪರವಾಗಿ ಕೆಲಸ ನಿರ್ವಹಿಸಲು ಸೂಚನೆ ನೀಡಿದ್ದರು.
ಇದನ್ನೂ ಓದಿ:'ನಿಮ್ಮ ತಕ್ಕಡಿ ಸಮವಾಗಿರಲಿ': ನೂತನ ಸ್ಪೀಕರ್ಗೆ ಮಾಜಿ ಸಿಎಂ ಬೊಮ್ಮಾಯಿ ಸಲಹೆ