ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೆಡಿಎಸ್ ಕೇಂದ್ರಿತ ಪ್ರದೇಶದಲ್ಲಿ ಬಿಜೆಪಿ ಬೆಳೆದಿದೆ. ಹಿಂದೆ ಶ್ರೀಮಂತರ, ವಿದ್ಯಾವಂತರ, ನಗರವಾಸಿ ಪಕ್ಷ ಎಂದು ಬಿಜೆಪಿಯನ್ನು ಕಾಂಗ್ರೆಸ್ ಹೇಳುತ್ತಿತ್ತು. ಆದರೆ, ಇದೀಗ ಬಿಜೆಪಿ ಸರ್ವವ್ಯಾಪಿಯಾಗಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದೆ ಎಂದರು.
ಕಾಂಗ್ರೆಸ್ನಲ್ಲಿ ಕೆಲಸಕ್ಕೆ ಹಿಂದೂಗಳು ಸಿಗುವುದಿಲ್ಲ:10 ದಿನದ ಬೂತ್ ವಿಜಯ ಅಭಿಯಾನದಲ್ಲಿ ಪೇಜ್ ಪ್ರಮುಖರು ಮತದಾರರ ಸಂಪರ್ಕ, ಮನೆ - ಮನೆಗಳಲ್ಲಿ ಪಕ್ಷದ ಸ್ಫೀಕರ್ ಅಂಟಿಸುವುದು, ವಾಟ್ಸ್ಆ್ಯಪ್ ಗ್ರೂಪ್ಗಳ ರಚನೆ, ಕೇಂದ್ರ ಮತ್ತು ರಾಜ್ಯಗಳ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಲುಪಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಒಂದೇ ಒಂದು ಹಿಂದೂಗಳು ಸಿಗುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ: ಮುಂದಿನ ಮುಖ್ಯಮಂತ್ರಿಗಳಾಗಲು ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹೊಸ ಶರ್ಟ್ಗಳನ್ನು ಹೊಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ, ಭ್ರಷ್ಟಾಚಾರಿಗಳ ಪಕ್ಷ. ನಮ್ಮ ಸರ್ಕಾರವನ್ನು 40 ಪರ್ಸೆಂಟ್ ಎಂದು ಟೀಕಿಸಿದ ಕೆಂಪಣ್ಣ ಜೈಲಿಗೆ ಹೋಗಿದ್ದಾರೆ. ಇನ್ನು, ಭ್ರಷ್ಟಾಚಾರ ಮಾಡಿದ ಸಿದ್ದರಾಮಯ್ಯ ಮುಂದಿನ ಚುನಾವಣೆಗೂ ಮುಂಚೆ ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು. ಗೋಹತ್ಯೆ ನಿಷೇದ, ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೊಳಿಸಿದ ಸರ್ಕಾರ, ಲವ್ ಜೆಹಾದ್ ಕಾನೂನನ್ನು ತರಲಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಬೂತ್ ವಿಜಯ ಅಭಿಯಾನ.. ಮನೆ ಮನೆಗೆ ತೆರಳಿ ಧ್ವಜ ಕಟ್ಟಿದ ಸಿಎಂ