ಮಂಗಳೂರು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪ್ರತಿ ಬಾರಿ ಸುಳ್ಳು ಹೇಳುತ್ತಾರೆ. ಮೊದಲಿಗೆ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದ್ದರು. ಬಳಿಕ, ಗೋಮಾಂಸ ತಿಂದಿಲ್ಲ ಅಂದಿದ್ದಾರೆ. ಪ್ರತಿ ಬಾರಿಯೂ ಸುಳ್ಳನ್ನೇ ಹೇಳುತ್ತಿದ್ದು, ಸುಳ್ಳಿನ ಪಕ್ಷದ ನಾಯಕನಿಗೆ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರಿಗೆ ಗೋಮಾಂಸ ತಿನ್ನುವುದು, ಹನುಮ ಜಯಂತಿ ದಿನ ನಾಟಿ ಕೋಳಿ ತಿನ್ನುವುದು ಹವ್ಯಾಸವೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳಾಗಿ ಇದ್ದವರನ್ನು ಜನರು ನೋಡುತ್ತಾ ಇರುತ್ತಾರೆ. ಅವರ ಆಚಾರ ವಿಚಾರ ನಡವಳಿಕೆಗಳನ್ನು ಜನರು ಗಮನಿಸುತ್ತಿರುತ್ತಾರೆ ಎಂದರು.
ಗೋ ಮಾಂಸ ತಿನ್ನುವುದು ನಮ್ಮ ಹಕ್ಕು, ತಿನ್ನುತ್ತೇನೆ ಅಂದರೆ ತಿಂದು ಬಿಡಿ, ಮುಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಗೋಮಾಂಸ ಸಪ್ಲೈ ಮಾಡ್ತೇವೆ, ಹನುಮ ಜಯಂತಿ ದಿನ ನಾಟಿ ಕೋಳಿ ಸಪ್ಲೈ ಮಾಡ್ತೇವೆ ಎಂದು ಹೇಳಲಿ ಎಂದು ಸವಾಲ್ ಹಾಕಿದರು.
ಕಾಂಗ್ರೆಸ್‌ನವರು ಈ ರೀತಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಯಾಂಪಲ್ ಗೆಂದು ಉಳ್ಳಾಲ ಕ್ಷೇತ್ರ ಉಳಿಸಿಕೊಂಡಿದ್ದಾರೆ. ಗೋಹತ್ಯೆ ಮಾಡಿದವರನ್ನು ಹಿಡಿದುಕೊಟ್ಟವರಿಗೆ ರಕ್ಷಣೆ ಕೊಡದೆ ಗೋಹತ್ಯೆ ಮಾಡಿದವರನ್ನು ರಕ್ಷಿಸಿದ್ದಕ್ಕೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.