ಮಂಗಳೂರು: ಇಂದು ರಾಜ್ಯಾದ್ಯಂತ ಬಕ್ರೀದ್ ಆಚರಿಸಲಾಗುತ್ತಿದ್ದು ಕಡಲನಗರಿ ಮಂಗಳೂರಿನಲ್ಲಿಯೂ ಮುಸ್ಲಿಮರು ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಮಸೀದಿಗಳಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದಾರೆ.
ಮಂಗಳೂರಿನ ಪ್ರಮುಖ ಮಸೀದಿಗಳಾದ ಉಳ್ಳಾಲ ದರ್ಗಾ, ಬಾವುಟ ಗುಡ್ಡೆಯ ಈದ್ಗಾ ಮಸೀದಿ, ಬಂದರ್ನ ಝೀನತ್ ಬಕ್ಷ್ ಮಸೀದಿ ಮೊದಲಾದೆಡೆ ಮುಸ್ಲಿಂ ಬಾಂಧವರು ಪ್ರಾರ್ಥನೆ ನಡೆಸಿದ್ದಾರೆ.
ಬಕ್ರೀದ್ ಕುರಿತು ರಾಜ್ಯದ ಜನತೆಗೆ ಸಿಎಂ ಬಿಎಸ್ ಯಡಿಯೂರಪ್ಪ ಶುಭಹಾರೈಸಿದ್ದಾರೆ. ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ. ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ ಎಂದು ಪ್ರಾರ್ಥಿಸೋಣ. ಸುರಕ್ಷಿತವಾಗಿ ಹಬ್ಬ ಆಚರಿಸಿ ಎಂದು ಟ್ವೀಟ್ ಮಾಡಿದ್ದಾರೆ.