ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನ ದೇವಭೂಮಿ ಮಾದರಿಯಲ್ಲಿರುವ ರುದ್ರಭೂಮಿಯಲ್ಲಿ, ಹಿಂದೂ ರುದ್ರಭೂಮಿ ಸಮಿತಿ ಹಾಗೂ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿಯು ಮಹಾ ಶಿವರಾತ್ರಿ ಅಂಗವಾಗಿ ನಿನ್ನೆ ಆಯೋಜಿಸಿದ್ದ ವಿಶಿಷ್ಟ ಮತ್ತು ಅಪರೂಪದ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.
ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಭಜನಾ ಕಾರ್ಯಕ್ರಮ ನಡೆಯುವುದೇ ವಿಶೇಷ, ಅಲ್ಲಿಗೆ ಜನರು ಬರುವುದು ವಿರಳ. ಅಂತಹ ಸ್ಥಳದಲ್ಲಿ ರಾತ್ರಿ ಹೊತ್ತಿನಲ್ಲಿ ಶಿವನ ಪ್ರತಿಮೆ ಬಳಿ ಕರ್ಪೂರದ ಆರತಿ ಬೆಳಗಿ, ಬಿಲ್ವಾರ್ಚನೆಗೈದು, ಪ್ರಾರ್ಥನೆ ಸಲ್ಲಿಸುವ ಅಭೂತಪೂರ್ವ ಕ್ಷಣ ನಿನ್ನೆ ರಾತ್ರಿ ನಿರ್ಮಾಣವಾಗಿತ್ತು. ಮಧ್ಯ ರಾತ್ರಿವರೆಗೂ ನಡೆದ ಭಜನಾ ಸಂಕೀರ್ತನೆಯಲ್ಲಿ ಸುಮಾರು 8 ತಂಡಗಳು ಭಾಗವಹಿಸಿದ್ದವು.