ಉಳ್ಳಾಲ: ಮಲಪ್ಪುರಂನಿಂದ ಪವಿತ್ರ ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲಿ ಹೊರಟಿರುವ ಶಿಹಾಬ್ ಚೊಟ್ಟೂರು ಗುರುವಾರ ಸಂಜೆ 5.30ಕ್ಕೆ ತಲಪಾಡಿ ಗಡಿ ಮೂಲಕ ದ.ಕ.ಜಿಲ್ಲೆ ಪ್ರವೇಶಿಸಿದ್ದು, ಈ ವೇಳೆ ನೂರಾರು ಮಂದಿ ಭವ್ಯ ಸ್ವಾಗತ ಕೋರಿದರು. ಶಿಹಾಬ್ ಅವರು ಸುಮಾರು 8,600ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಮೆಕ್ಕಾವನ್ನು 9 ತಿಂಗಳ ಅವಧಿಯಲ್ಲಿ ಕಾಲ್ನಡಿಗೆಯಲ್ಲೇ ಕ್ರಮಿಸುವ ಸಂಕಲ್ಪ ಮಾಡಿದ್ದಾರೆ.
ಶಿಹಾಬ್ ಚೊಟ್ಟೂರ್ ಕಾಲ್ನಡಿಗೆ ಯಾತ್ರೆ ಗುರುವಾರ ಮಧ್ಯಾಹ್ನ ಕೇರಳದ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಿಹಾಬ್, ಕೆಲವು ಹೊತ್ತು ವಿಶ್ರಾಂತಿ ಪಡೆದು ಬಳಿಕ ಯಾತ್ರೆ ಮುಂದುವರಿಸಿದರು. ಕೋಟೆಕಾರ್ ಸಮೀಪದ ಬೀರಿಯ ಮಸೀದಿಯಲ್ಲಿ ಮಗ್ರಿಬ್ ನಮಾಜ್ ಮಾಡಿದ ಶಿಹಾಬ್ಗೆ ಸಾರ್ವಜನಿಕರು ಶುಭಕೋರಿದರು.
ಈ ಸಂದರ್ಭದಲ್ಲಿ ಭಾರಿ ಜನಜಂಗುಳಿ, ನೂಕು ನುಗ್ಗಲು ಉಂಟಾಗಿ ಶಿಹಾಬ್ ಅವರಿಗೆ ನಿಧಾನವಾಗಿ ನಡೆಯುವುದೇ ಕಷ್ಟವಾಯಿತು. ತಲಪಾಡಿಯಿಂದ ಬೀರಿವರೆಗೂ ಅವರನ್ನು ಸುತ್ತುವರೆದು ಹಿಂಬಾಲಿಸಿಕೊಂಡು ಬಂದ ಜನರ ಅತ್ಯುತ್ಸಾಹ ನೂಕಾಟ, ತಳ್ಳಾಟಕ್ಕೆ ಕಾರಣವಾಯಿತು.
ನಗರದ ಪಂಪ್‌ವೆಲ್‌ನ ತಖ್ವಾ ಮಸೀದಿಯಲ್ಲಿ ರಾತ್ರಿ ತಂಗುವ ಬಗ್ಗೆ ಶಿಹಾಬ್ ನಿರ್ಧರಿಸಿದ್ದರು. ಆದರೆ, ಸಾರ್ವಜನಿಕರ ನೂಕು ನುಗ್ಗಲಿನಿಂದ ನಿಗದಿತ ಸಮಯಕ್ಕೆ ಸ್ಥಳ ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ, ಕೋಟೆಕಾರ್ ಬೀರಿಯ ಹನಫಿ ಮಸೀದಿಯಲ್ಲೇ ರಾತ್ರಿ ತಂಗಿದರು. ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ರಾಜ್ಯ ಹಜ್ ಕಮಿಟಿಯ ಮಾಜಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮತ್ತಿತರರು ಶಿಹಾಬ್ ಅವರನ್ನು ಗಡಿಪ್ರದೇಶದಲ್ಲಿ ಬರ ಮಾಡಿಕೊಂಡರು.
ಇದನ್ನೂ ಓದಿ:ಪಿಎಸ್‌ಐ ಪರೀಕ್ಷೆ ಅಕ್ರಮ: ಮತ್ತೆ ಇಬ್ಬರ ಬಂಧನ, ಬಂಧಿತರ ಸಂಖ್ಯೆ 41ಕ್ಕೆ ಏರಿಕೆ