ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಪ್ರಶಸ್ತಿ ಗೆದ್ದ ಮಂಗಳೂರಿನ ಶಮಾ ವಾಜಿದ್ ಮಂಗಳೂರು (ದಕ್ಷಿಣ ಕನ್ನಡ): ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಪ್ರಶಸ್ತಿಯನ್ನು ಮಂಗಳೂರಿನ ಶಮಾ ವಾಜಿದ್ ಗೆದ್ದಿದ್ದಾರೆ. ಈ ಸ್ಪರ್ಧೆಯನ್ನು ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ಸ್ ನಡೆಸಿತ್ತು. ಇದರಲ್ಲಿ ಶಮಾ ಗೆಲ್ಲುವ ಮೂಲಕ ಗ್ಲೋಬಲ್ ಮಿಸೆಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಸ್ಪರ್ಧೆಯ ಆಡಿಷನ್‌ಗಳು ದೇಶದ 22ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆದಿದ್ದವು. ಅಲ್ಲಿ ಸಾವಿರಾರು ಪ್ರತಿಭಾವಂತ ಮಹಿಳೆಯರು ಆಡಿಷನ್ನಲ್ಲಿ ಭಾಗಿಯಾಗಿದ್ದರು. ಅವರಲ್ಲಿ ಶಮಾ ವಾಜಿದ್ ನವದೆಹಲಿಯಲ್ಲಿ ನಡೆದ ಗ್ರಾಂಡ್ ಫಿನಾಲೆಗೆ ತಲುಪಿದ ಟಾಪ್ 40ರಲ್ಲಿ ಒಬ್ಬರಾದರು. ಎಲ್ಲಾ ಫೈನಲಿಸ್ಟ್‌ಗಳು 5 ದಿನಗಳ ಕಾಲ ಮಾರ್ಗದರ್ಶಕರಿಂದ ಕಠಿಣ ತರಬೇತಿ ಪಡೆದರು.
ಕ್ಯಾಟ್‌ವಾಕ್, ಗ್ರೂಮಿಂಗ್, ಕೊರಿಯೋಗ್ರಾಫಿ, ಇಮೇಜ್ ಕನ್ಸಲ್ಟಿಂಗ್, ಆತಂಕ ನಿರ್ವಹಣೆ, ದೈಹಿಕ ಫಿಟ್‌ನೆಸ್ ಇತ್ಯಾದಿಗಳ ಉತ್ತಮ ಅಂಶಗಳಲ್ಲಿ ಅವರಿಗೆ ತರಬೇತಿ ನೀಡಲಾಗಿತ್ತು. ಕರ್ನಾಟಕವನ್ನು ಪ್ರತಿನಿಧಿಸಿದ ಶಮಾ ವಾಜಿದ್ ಅವರು ಫೂಲ್ ರೌಂಡ್, ಎಕ್ನಿಕ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಫಾರ್ಮಲ್ ಸುತ್ತುಗಳಂತಹ ವಿವಿಧ ಸುತ್ತುಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.
ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಪ್ರಶಸ್ತಿ ಗೆದ್ದ ಮಂಗಳೂರಿನ ಶಮಾ ವಾಜಿದ್ ನಂತರ ಅವರು ಅಗ್ರ 10 ಫೈನಲಿಸ್ಟ್ಗಳಲ್ಲಿ ಸ್ಥಾನ ಪಡೆದರು. ಅಂತಿಮವಾಗಿ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಕಿರೀಟವನ್ನು ಬಾಲಿವುಡ್ ಸೆಲೆಬ್ರಿಟಿ ಮಲೈಕಾ ಅರೋರಾ ಅವರಿಂದ ಪಡೆದರು. 2001ರ ಮಾಜಿ ಮಿಸೆಸ್ ಇಂಡಿಯಾ ಅದಿತಿ ಗೋವಿತ್ರಿಕ, ಲೋಕೇಶ್ ಶರ್ಮಾ, ಕೀರ್ತಿ ಮಿಶ್ರಾ ನಾರಂಗ್, ಅಲ್ಲೀ ಶರ್ಮಾ, ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾದ ಮನೀಶಾ ಸಿಂಗ್, ರೋಹಿತ್ ಜೆ.ಕೆ ಸೇರಿದಂತೆ ಅನೇಕರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಗ್ಲೋಬಲ್ ಮಿಸೆಸ್ ಯೂನಿವರ್ಸ್ಗೆ ಆಯ್ಕೆ:ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಕಿರೀಟವನ್ನು ಮುಡಿಗೇರಿಸಿದ ಶಮಾ ವಾಜಿದ್ ಇದೀಗ ಜಾಗತಿಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 2024ರಲ್ಲಿ ಗ್ಲೋಬಲ್ ಮಿಸೆಸ್ ಯೂನಿವರ್ಸ್ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾರತವನ್ನು ಅವರು ಪ್ರತಿನಿಧಿಸಲಿದ್ದಾರೆ.
ಶಮಾ ವಾಜಿದ್ ಪರಿಚಯ:ಕುಟುಂಬದವರ ಪ್ರೋತ್ಸಾಹದಿಂದ ಫ್ಯಾಷನ್ ಲೋಕದಲ್ಲಿ ಶಮಾ ವಾಜಿದ್ ಈ ಸಾಧನೆ ಮಾಡಿದ್ದಾರೆ. ಶಮಾ, ಶ್ರೀನಿವಾಸ ಆರ್ಕಿಟೆಕ್ಟ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಇವರಿಗೆ 13 ತಿಂಗಳ ಗಂಡು ಮಗುವಿದೆ. ಪುಟ್ಟ ಮಗುವಿನ ಲಾಲನೆ - ಪಾಲನೆ ಮಾಡುತ್ತಲೇ ಸಾಧನೆಯತ್ತ ಮುನ್ನುಗ್ಗುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಶಮಾ ವಾಜಿದ್, "ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಪ್ರಶಸ್ತಿ ಗೆದ್ದಿದ್ದೇನೆ. 2024ರಲ್ಲಿ ಗ್ಲೋಬಲ್ ಮಿಸೆಸ್ ಯೂನಿವರ್ಸ್ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದೇನೆ. ಟಾಪ್ 40 ಸ್ಪರ್ಧಿಗಳಿಗೆ ಹಲವು ಕಠಿಣ ಸುತ್ತುಗಳನ್ನು ನೀಡಿದ ಬಳಿಕ ಟಾಪ್ 10 ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಟಾಪ್ 5 ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಯಿತು" ಎಂದು ತಿಳಿಸಿದರು.
ನನಗೆ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ;"ಧರ್ಮ ಎಲ್ಲರಿಗೂ ಒಂದೇ ಸಮಾನ. ಅದನ್ನು ಕೆಲವರು ಒಂದೊಂದು ರೀತಿಯಲ್ಲಿ ಅನುಸರಿಸುತ್ತಾರೆ. ನನಗೆ ನನ್ನ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದೆ. ನಮ್ಮ ದೇಶಕ್ಕೆ ಯಾವುದೇ ಧಕ್ಕೆ ಬಾರದಂತೆ ನಾನು ಜಾಗೃತೆ ವಹಿಸುತ್ತೇನೆ. ನಾವೆಲ್ಲರೂ ಒಂದೇ, ನಮಗೆ ಜಾತಿ, ಭೇದ- ಭಾವ ಯಾವುದೂ ಇರಬಾರದು. ನನಗೆ ಎಲ್ಲಾ ಸಮುದಾಯದ ಬಗ್ಗೆಯೂ ಗೌರವವಿದೆ" ಎಂದರು.
ಮುಂದುವರೆದು, "ನಾನು ಈ ರೀತಿ ಮಾಡೆಲ್ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವುದಕ್ಕೆ ಯಾರಿಂದಲೂ ವಿರೋಧ ಬಂದಿಲ್ಲ. ಅಲ್ಲದೇ ನನ್ನ ಪೋಷಕರು, ಫ್ಯಾಮಿಲಿ ಕೂಡ ಸಪೋರ್ಟ್ ಮಾಡಿದ್ದಾರೆ. ಅವರು ಒಂದು ವೇಳೆ ಬೇಡ ಅಂದಿದ್ರೆ, ನಾನು ಅವರನ್ನು ಒಪ್ಪಿಸುತ್ತಿದ್ದೆ. ನನಗೆ ಈಗ ಎಲ್ಲ ಕಡೆಯಿಂದ ಬೆಂಬಲ ಇದೆ. ನನ್ನ ಗಂಡ, ಅಪ್ಪ- ಅಮ್ಮ ನನ್ನಲ್ಲಿ, ನೀನು ಹೋಗಿ, ಇಷ್ಟಬಂದದ್ದು ಮಾಡು ಅಂತಾನೇ ಹೇಳಿದ್ದಾರೆ. ಹಾಗಂತ ಯಾರ ಭಾವನೆಗೂ ಧಕ್ಕೆ ತರುವ ಕೆಲಸ ಮಾಡಬೇಡ ಎಂದಿದ್ದಾರೆ. ಅದನ್ನು ಮನಸ್ಸಲ್ಲಿಟ್ಟುಕೊಂಡು ನನ್ನ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ:ಅಮೆರಿಕದಲ್ಲಿ 'ವಿಶ್ವ ಶ್ರೇಷ್ಠ ಕನ್ನಡಿಗ 2023' ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ