ಮಂಗಳೂರು: ಮಂಗಳೂರು ವಿವಿಯ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣವನ್ನು ಮಾಜಿ ಕುಲಸಚಿವರೇ ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗವು ವರದಿ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂರು ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಆರಬಿ ತರಗತಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ವಿಶ್ವವಿದ್ಯಾನಿಲಯಕ್ಕೆ ದೂರು ನೀಡಿದ್ದಳು. ಆದರೆ ಈ ಬಗ್ಗೆ ವಿಚಾರಣೆ ನಡೆಸುವ ಬದಲು ಅಂದಿನ ಕುಲಸಚಿವ ಡಾ. ಎ.ಎಂ. ಖಾನ್ ಮುಚ್ಚಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಈ ಪ್ರಯತ್ನವನ್ನು ಗಮನಿಸಿದ ವಿದ್ಯಾರ್ಥಿನಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ತಕ್ಷಣ ಮಹಿಳಾ ಆಯೋಗ ಈ ಬಗ್ಗೆ ವರದಿ ನೀಡುವಂತೆ ವಿಶ್ವವಿದ್ಯಾನಿಲಯವನ್ನು ಕೇಳಿದೆ.
ಇದರಿಂದ ವಿವಿಯು ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶ ನೀಡಿತ್ತು. ಈ ಬಗ್ಗೆ ಕಾರ್ಯಪ್ರವೃತ್ತವಾದ ತನಿಖಾ ತಂಡ ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಿ ಪ್ರೊ.ಆರಬಿ ಅವರು ಲೈಂಗಿಕ ಕಿರುಕುಳ ನಡೆಸಿದ್ದು ನಿಜವೆಂದು ವರದಿ ಸಿದ್ಧಪಡಿಸಿ 2018ರ ಡಿಸೆಂಬರ್ನಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದೆ ಎನ್ನಲಾಗ್ತಿದೆ.
ಆದರೆ ಕುಲಸಚಿವ ಡಾ. ಎ.ಎಂ. ಖಾನ್ ವರದಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸದೆ ವಿವಿ ಕಪಾಟಿನಲ್ಲಿಯೇ ಮುಚ್ಚಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದೀಗ ತಿಂಗಳ ಹಿಂದೆ ಲೈಂಗಿಕ ಕಿರುಕುಳ ವರದಿ ಇನ್ನೂ ಸಲ್ಲಿಕೆಯಾಗಿಲ್ಲ ಎಂದು ರಾಜ್ಯ ಮಹಿಳಾ ಆಯೋಗ ವಿವಿಗೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಪ್ರಸ್ತುತ ಕುಲಸಚಿವರಾಗಿರುವ ಡಾ. ರಾಜು ಮೊಗವೀರ ವಿವಿಯ ಐದು ಜನರ ಸಮುಖದಲ್ಲಿ ವರದಿಯನ್ನು ಕಪಾಟಿನಿಂದ ತೆಗೆದು ವಿಶ್ವವಿದ್ಯಾಲಯದ ನಿಯಮದಂತೆ ಸಿಂಡಿಕೇಟ್ ಸಭೆಯಲ್ಲಿ ವರದಿಯನ್ನು ಮಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸಭೆಯಲ್ಲಿ ವರದಿಯನ್ನು ಮುಚ್ಚಿಟ್ಟಿರುವ ಬಗ್ಗೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿ ಬಂದಿದೆ. ಇದೀಗ ಪ್ರೊ.ಆರಬಿ ಹಾಗೂ ಕುಲ ಸಚಿವ ಪ್ರೊ.ಎ.ಎಂ.ಖಾನ್ ಅವರ ತಲೆ ಮೇಲೆ ತೂಗುಗತ್ತಿ ನೇತಾಡುತ್ತಿದ್ದು, ರಾಜ್ಯ ಮಹಿಳಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ವರದಿ ನೀಡುವಂತೆ ಕೇಳಿತ್ತು. ಆದರೆ ವರದಿ ವಿವಿಯಲ್ಲೇ ಬಾಕಿಯಾಗಿದ್ದು, ಸಲ್ಲಿಕೆಯಾಗಿರಲಿಲ್ಲ. ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆದು ವರದಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.