ಕರ್ನಾಟಕ

karnataka

ETV Bharat / state

ಎಂಡೋಸಲ್ಫಾನ್ ಬಾಧಿತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ - ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ

ಎಂಡೋಸಲ್ಫಾನ್ ಬಾಧಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಮಂಗಳೂರಿನ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಲಯ ಸಂಕೀರ್ಣ
ನ್ಯಾಯಲಯ ಸಂಕೀರ್ಣ

By ETV Bharat Karnataka Team

Published : Sep 12, 2023, 2:06 PM IST

ಮಂಗಳೂರು:ಎಂಡೋಸಲ್ಫಾನ್ ಬಾಧಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗಂಭೀರ ಪ್ರಕರಣದಲ್ಲಿ ಅಪರಾಧಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33) ಶಿಕ್ಷೆಗೊಳಗಾದ ಅಪರಾಧಿ.

2015ರ ಅ.1ರಂದು ಯುವತಿಯ ತಂದೆ, ತಾಯಿ ಮತ್ತು ಸಹೋದರಿಯರು ತೋಟದ ಕೆಲಸಕ್ಕೆಂದು ಹೋಗಿದ್ದಾಗ ದುಷ್ಕೃತ್ಯ ನಡೆದಿತ್ತು. ಎಂಡೋಸಲ್ಪಾನ್ ಬಾಧಿತೆ ಒಬ್ಬಳೇ ಇರುವುದನ್ನು ತಿಳಿದುಕೊಂಡ ಆರೋಪಿ ಆಕೆಯನ್ನು ಜಗಲಿಯಿಂದ ಮನೆಯೊಳಗೆ ಎಳೆದುಕೊಂಡು ಹೋಗಿ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ವಿಟ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಸಮಗ್ರ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸೆ.7ರಂದು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿದ್ದರು. ಇದೀಗ ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 376(2)(ಎಲ್) ಅಡಿಯಲ್ಲಿ ಹತ್ತು ವರ್ಷದ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ಕಲಂ 448 ರಡಿ ಮೂರು ತಿಂಗಳ ಕಠಿಣ ಶಿಕ್ಷೆವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ.

ಎಎಸ್‌ಪಿಯಾಗಿದ್ದ ರಾಹುಲ್ ಕುಮಾರ್ ತನಿಖೆ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯಿದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿ ವಿರುದ್ಧ ಒಟ್ಟು 27 ಸಾಕ್ಷಿದಾರರನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದು ಅದರಲ್ಲಿ 14 ಸಾಕ್ಷಿದಾರರ ವಿಚಾರಣೆ ನಡೆದಿತ್ತು. ಯುವತಿ 5ನೇ ತರಗತಿಯಲ್ಲಿ ಓದುತ್ತಿದ್ದು, ಆಕೆಯ ತಂದೆ-ತಾಯಿ ಅನಕ್ಷರಸ್ಥರು. 2021ರ ಸೆ.22ರಂದು ವಿಚಾರಣೆ ಆರಂಭಗೊಂಡಿದ್ದು, 2023ರ ಫೆ.27ರಂದು ವಿಚಾರಣೆ ಮುಗಿದಿತ್ತು. ಅಭಿಯೋಜಕರ ಪರವಾಗಿ ಸರಕಾರಿ ಅಭಿಯೋಜಕ ಜ್ಯೋತಿ ಪ್ರಮೋದ ನಾಯಕ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ:ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಲ್ಯಾಬ್ ಟೆಕ್ನಿಷಿಯನ್​ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಹೆಬ್ಬಾಳ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಬಂಧಿತ ಆರೋಪಿ. ಅನಾರೋಗ್ಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರಂದು ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಿಟಿ ಸ್ಕ್ಯಾನ್ ಮಾಡಲು ಸೂಚಿಸಿದ್ದರಿಂದ ಪರೀಕ್ಷೆ ಒಳಗಾಗಲು ವೃದ್ಧೆ ಹೋಗಿದ್ದರು. ಈ ವೇಳೆ, ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಅಶೋಕ್ ಕಾರ್ಯ ನಿರ್ವಹಿಸುತ್ತಿದ್ದ.

ಆರೋಪಿ ಪರೀಕ್ಷೆ ನೆಪದಲ್ಲಿ ವೃದ್ಧೆಯ ಎದೆ ಹಾಗೂ ಹೊಟ್ಟೆ ಭಾಗವನ್ನು ಮುಟ್ಟಿದ್ದನು. ಇದನ್ನು ಪ್ರಶ್ನಿಸಿದ್ದಕ್ಕೆ‌ ವೃದ್ಧೆಗೆ ನೆಪ ಹೇಳಿದ್ದಾನೆ‌. ಕೆಲ ಕ್ಷಣಗಳ ಬಳಿಕ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ.‌ ಇದರಿಂದ ಹೆದರಿ ಹೊರಬಂದ ವೃದ್ಧೆಗೆ ಈ ಬಗ್ಗೆ ಯಾರಿಗೂ ಹೇಳದಂತೆ ಅಶೋಕ್ ಬೆದರಿಕೆ ಹಾಕಿದ್ದನು. ಘಟನೆ ಸಂಬಂಧ ಲ್ಯಾಬ್​ನಲ್ಲಿ‌ ನಡೆದ ವಿಷಯವನ್ನು ವೃದ್ಧೆ ಗಂಡನಿಗೆ ತಿಳಿಸಿದ್ದಾರೆ.‌ ಈ ಸಂಬಂಧ ನೀಡಿದ ದೂರಿನ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣ: ಮರು ತನಿಖೆ ಕೋರಿದ್ದ ಅರ್ಜಿ ವಜಾ

ABOUT THE AUTHOR

...view details