ಮಂಗಳೂರು:ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಆರೋಪಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ಹಾಗೂ 45 ಸಾವಿರ ರೂ ದಂಡ ವಿಧಿಸಿ ತೀರ್ಪಿತ್ತಿದೆ.
ಪ್ರಕರಣದ ವಿವರ:
ಕೊಪ್ಪಳ ಮೂಲದ ಯುವತಿ ತನ್ನ ತಂದೆ-ತಾಯಿಯೊಂದಿಗೆ ಮಂಗಳೂರಿನಲ್ಲಿ ಅರುಣ್ ಭಾವಾ ಎಂಬ ಸಿವಿಲ್ ಕಾಂಟ್ರ್ಯಾಕ್ಟರ್ ಜೊತೆ ಕೂಲಿ ಕೆಲಸ ಮಾಡುತ್ತಿದ್ದರು. ಇದೇ ಅರುಣ್ರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ನಾಗಗೊಂಡನಹಳ್ಳಿ ಮೂಲದ ರಾಮ ಅಲಿಯಾಸ್ ದಾಸಪ್ಪ ಎಂಬಾತ ಮೇಸ್ತ್ರಿಯಾಗಿ ದುಡಿಯುತ್ತಿದ್ದ. ಇವರಿಗೆ ವಾಸಿಸಲು ಅರುಣ್ ಅವರು ನಗರದ ಹೊರವಲಯದಲ್ಲಿರುವ ನೀರುಮಾರ್ಗ ಸಮೀಪದ ಸರಿಪಳ್ಳ ಎಂಬಲ್ಲಿ ಶೆಡ್ ನಿರ್ಮಿಸಿ ಕೊಟ್ಟಿದ್ದರು. ಈ ಶೆಡ್ನಲ್ಲಿ ಎರಡೇ ಕೋಣೆಗಳಿದ್ದು ಒಂದರಲ್ಲಿ ರಾಮ ಅಲಿಯಾಸ್ ದಾಸಪ್ಪ ವಾಸಿಸುತ್ತಿದ್ದರೆ, ಮತ್ತೊಂದರಲ್ಲಿ ಯುವತಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು.
ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ 2018 ಜನವರಿ 11ರಂದು ಯುವತಿಯ ತಂದೆ, ತಾಯಿ ಕೆಲಸಕ್ಕೆ ಹೋಗಿರುವ ಸಮಯದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ರಾಮ ಅಲಿಯಾಸ್ ದಾಸಪ್ಪ ಯುವತಿ ಓರ್ವಳೇ ಇದ್ದಾಗ ಮನೆಗೆ ಬಂದಿದ್ದಾನೆ. ಈ ಸಂದರ್ಭ ಆಕೆಯಲ್ಲಿ ತಾನು ನಿನ್ನನ್ನು ಮದುವೆಯಾಗುವೆನೆಂದು ಪುಸಲಾಯಿಸಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಈ ಸಂದರ್ಭ ಬೆದರಿಕೆ ಹಾಕಿದ್ದನು.
ವಿಷಯ ತಿಳಿದ ಯುವತಿಯ ತಂದೆ ತಾಯಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡುತ್ತಾರೆ. ಆಗ ಆಕೆ ಆರು ತಿಂಗಳ ಗರ್ಭಿಣಿಯಾಗಿರುತ್ತಾಳೆ. ಪೊಲೀಸರು ರಾಮ ಅಲಿಯಾಸ್ ದಾಸಪ್ಪನನ್ನು ದಸ್ತಗಿರಿ ಮಾಡುತ್ತಾರೆ. ಬಳಿಕ ಯುವತಿಯು ಹಾಸನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಂದಿನ ತನಿಖಾಧಿಕಾರಿ ಸಿದ್ದೇಗೌಡ ಹೆಚ್. ಭಜಂತ್ರಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಗು, ಯುವತಿ ಹಾಗೂ ಆರೋಪಿಯ ರಕ್ತವನ್ನು ಡಿಎನ್ಎ ಪರೀಕ್ಷೆ ಮಾಡಿಸುತ್ತದೆ. ಡಿಎನ್ಎ ಪರೀಕ್ಷೆಯಲ್ಲಿ ಆರೋಪಿ ರಾಮ ಅಲಿಯಾಸ್ ದಾಸಪ್ಪನೇ ಮಗುವಿನ ಜೈವಿಕ ತಂದೆ ಎಂದು ಸಾಬೀತಾಗುತ್ತದೆ. ಅಲ್ಲದೆ ಆತನಿಗೆ ಈ ಹಿಂದೆ ಮದುವೆಯಾಗಿ ಎರಡು ಮಕ್ಕಳಿದೆ ಎಂದು ತನಿಖೆಯಿಂದ ಸಾಬೀತಾಗುತ್ತದೆ.
ಆರೋಪಿ ರಾಮ ಅಲಿಯಾಸ್ ದಾಸಪ್ಪ ಯುವತಿಯನ್ನು ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿ, ಐಪಿಸಿ ಸೆಕ್ಷನ್ 376ರ(ಅತ್ಯಾಚಾರ) ಅಪರಾಧಕ್ಕೆ ಏಳು ವರ್ಷ ಕಠಿಣ ಸಜೆ 25 ಸಾವಿರ ರೂ. ದಂಡ, ಐಪಿಸಿ ಸೆಕ್ಷನ್ 417ರ(ಮದುವೆಯಾಗುವೆನೆಂದು ನಂಬಿಸಿದ್ದ ಮೋಸ ಮಾಡಿದ್ದಕ್ಕೆ) ಅಪರಾಧಕ್ಕೆ ಒಂದು ವರ್ಷ ಶಿಕ್ಷೆ, 10 ಸಾವಿರ ರೂ. ದಂಡ, ಐಪಿಸಿ ಸೆಕ್ಷನ್ 506ರ(ಕೊಲೆ ಬೆದರಿಕೆ) ಅಪರಾಧಕ್ಕೆ ಒಂದು ವರ್ಷ ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿದೆ. ದಂಡದ ಒಟ್ಟು ಮೊತ್ತ 45 ಸಾವಿರ ರೂ.ದಲ್ಲಿ 25 ಸಾವಿರ ರೂ.ವನ್ನು ಯುವತಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ ಮಗು ರಾಮ ಅಲಿಯಾಸ್ ದಾಸಪ್ಪನದ್ದೆಂದು ಋಜುವಾತು ಆದ ಹಿನ್ನೆಲೆಯಲ್ಲಿ 50 ಸಾವಿರ ರೂ.ವನ್ನು ಆತ ನ್ಯಾಯಾಲಯಕ್ಕೆ ನೀಡಬೇಕು. ಈ ಹಣವನ್ನು ಮಗುವಿನ ಹೆಸರಿನಲ್ಲಿ ಎಫ್ಡಿ ಇಡಬೇಕೆಂದು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸೈದುನ್ನೀಸಾ ಆದೇಶ ನೀಡಿದ್ದಾರೆ.