ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ ಉಳ್ಳಾಲ(ದಕ್ಷಿಣಕನ್ನಡ): ಸೇತುವೆ ಮೇಲೆ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಸರಣಿ ಅಪಘಾತ ಸಂಭವಿಸಿರುವ ಘಟನೆ ನೇತ್ರಾವತಿ ನದಿಯ ಹೊಸ ಸೇತುವೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಒಟ್ಟು ಆರು ವಾಹನಗಳು ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿ ಸೇತುವೆ ಮಧ್ಯ ಭಾಗದಲ್ಲಿ ಕೆಟ್ಟು ನಿಂತಿತ್ತು. ಇದೇ ಸಂದರ್ಭದಲ್ಲಿ ಭಾರಿ ಮಳೆ ಆರಂಭವಾಗಿತ್ತು. ಈ ವೇಳೆ ಅತಿವೇಗದಿಂದ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಳಿಕ ಒಂದರ ಹಿಂದೆ ಒಂದರಂತೆ ರಿಟ್ಝ್ ಕಾರು, ಕಾಂಟೆಸ್ಸಾ ಕಾರು, ಪಿಕಪ್ ವಾಹನ, ಕೊನೆಗೆ ಕುಂಪಲ ಕಡೆಗೆ ತೆರಳುವ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಕೆಲವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿವೆ. ಸರಣಿ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತ್ಯೇಕ ಘಟನೆಗಳು- ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಐವರ ಬಂಧನ :ಮಂಗಳೂರಿನಲ್ಲಿಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡಬಿದಿರೆಯ ಬೆಳುವಾಯಿ ಗ್ರಾಮದ ನವೀದ್ (30), ಪಡುಮಾರ್ನಾಡು ಗ್ರಾಮದ ಉಮೇಶ್ ( 40), ಪ್ರಸಾದ್ ದೇವಾಡಿಗ (35), ಮಾರ್ಪಾಡಿ ಗ್ರಾಮದ ಸುಖೇಶ್ ಆಚಾರ್ಯ(33), ಪುತ್ತಿಗೆ ಗ್ರಾಮದ ಪುರಂದರ ಕುಲಾಲ್ (38) ಎಂದು ಗುರುತಿಸಲಾಗಿದೆ. ಕಳೆದ ಭಾನುವಾರ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು.
ಮೂಡಬಿದರೆ ತಾಲೂಕಿನ ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿ ಎಸ್.ಐ ಸ್ಪೋರ್ಟ್ಸ್ ಅಂಗಡಿಯ ಮುಂಭಾಗದಲ್ಲಿ ನವೀದ್ ಎಂಬಾತ ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು Comfort Zone 247 ಎಂಬ ಮೊಬೈಲ್ ವೆಬ್ಸೈಟ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ನವೀದ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಈತನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ, ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್ಗೆ ಬೆಟ್ಟಿಂಗ್ ಮಾಡಲು ಇವರಿಬ್ಬರಿಂದ ಆನ್ಲೈನ್ ಮೂಲಕ ಹಣ ಪಡೆಯುವುದಾಗಿ ತಿಳಿಸಿದ್ದಾನೆ. Comfort Zone 247 ಎಂಬ ವೆಬ್ ಸೈಟ್ ಅನ್ನು ಮುಂಬೈನಲ್ಲಿರುವ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾನೆಂದು ತಿಳಿಸಿದ್ದಾನೆ.
ಮೂಡಬಿದರೆ ತಾಲೂಕಿನ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆಯ ಕಡಲಕೆರೆ ಪಾರ್ಕ್ನಲ್ಲಿ ಸುಖೇಶ್ ಆಚಾರ್ಯ ಎಂಬಾತನು ಪುರಂದರ ಎಂಬಾತನಿಂದ ಹಣ ಪಡೆದು allpaanel.com/m/home ಎಂಬ ಮೊಬೈಲ್ ವೆಬ್ ಸೈಟ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದನು. ಸುಖೇಶ್ ಎಂಬಾತನನ್ನು ಹಿಡಿದು ವಿಚಾರಣೆ ನಡೆಸಿದಾಗ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪಂದ್ಯಗಳಿಗೆ ಬೆಟ್ಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ. allpaanel.com/m/home ಎಂಬ ವೆಬ್ ಸೈಟ್ ನ್ನು ಮುಂಬೈನಲ್ಲಿರುವ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾನೆಂದು ತಿಳಿಸಿದ್ದಾನೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್ : ತಾಯಿ, ಮಗುವಿಗೆ ಗಾಯ :ಸಿಡಿಲು ಬಡಿದ ಪರಿಣಾಮ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ತಾಯಿ ಮತ್ತು ಮಗುವಿನ ಕಿವಿಗೆ ಹಾನಿಯಾಗಿರುವ ಘಟನೆ ಮಂಗಳೂರು ಹೊರವಲಯದ ವಾಮಂಜೂರು ಅಮೃತನಗರ ಎಂಬಲ್ಲಿ ನಡೆದಿದೆ. ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, ಸಿಡಿಲಿನ ಆರ್ಭಟಕ್ಕೆ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಮನೆಯ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಹಾನಿಯಾಗಿದೆ.
ಇದನ್ನೂ ಓದಿ :ಸುಧಾ ಮೂರ್ತಿ ಹೆಸರು ದುರ್ಬಳಕೆ ಪ್ರಕರಣ: ಬೆಂಗಳೂರು ಪೊಲೀಸರಿಂದ ಆರೋಪಿ ಬಂಧನ