ಕರಾವಳಿ, ಮಲೆನಾಡಿನಲ್ಲಿ ಕೋಮು ಸೌಹಾರ್ದತೆಯ ಮರುಸ್ಥಾಪನೆಗೆ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆ: ರಣದೀಪ್ ಸಿಂಗ್ ಸುರ್ಜೇವಾಲ ಮಂಗಳೂರು: ಕಾಂಗ್ರೆಸ್ನ ರಾಜ್ಯಮಟ್ಟದ ಪ್ರಜಾಧ್ವನಿ ಯಾತ್ರೆಯ ಬೆನ್ನಿಗೆ ಕರಾವಳಿ, ಮಲೆನಾಡಿನ ಆರು ಜಿಲ್ಲೆಗಳಿಗೆ ಪ್ರತ್ಯೇಕ ಕರಾವಳಿ ಮಲೆನಾಡು ಪ್ರಜಾಧ್ವನಿ ಯಾತ್ರೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಪಕ್ಷದ ಪ್ರಮುಖರ ಜೊತೆ ಮಹತ್ವದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು ಅವರು, ಕರಾವಳಿ ಮಲೆನಾಡು ಪ್ರಜಾಧ್ವನಿ ಯಾತ್ರೆ 30 ದಿನಗಳ ಕಾಲ ಇರಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಅಭಿವೃದ್ಧಿ, ಸಮೃದ್ಧಿ, ಕೋಮು ಸೌಹಾರ್ದತೆಯ ಮರುಸ್ಥಾಪನೆಯ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಈ ಯಾತ್ರೆ ಸಂಚರಿಸಿ. ಪ್ರತಿ ಕ್ಷೇತ್ರದಲ್ಲು ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸಲಾಗುವುದು. ಫೆಬ್ರವರಿ 5 ರಿಂದ 9ರವರೆಗೆ ಮೊದಲ ಹಂತದ ಯಾತ್ರೆ ನಡೆಯಲಿದ್ದು, ಫೆಬ್ರವರಿ 15 ರಿಂದ ಮಾರ್ಚ್ 10ರವರೆಗೆ 2ನೇ ಹಂತದ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಯಾತ್ರೆಯ ನೇತೃತ್ವವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಹಿರಿಯ ಮುಖಂಡರಾದ ಆರ್ವಿ ದೇಶಪಾಂಡೆ, ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮಧು ಬಂಗಾರಪ್ಪ, ವಿನಯ ಕುಮಾರ್ ಸೊರಕೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಿಬಿಐ ವರದಿ ಬಹಿರಂಗವಾದ ಬಳಿಕ ತುಟಿ ಬಿಚ್ಚುತ್ತಿಲ್ಲ: ಬಿಜೆಪಿಯ ಕೋಮು ಧ್ರುವೀಕರಣ ಅಜೆಂಡಾವು ಉತ್ತರ ಕನ್ನಡದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಮೇಲೆ ಸುಳ್ಳು ಆಪಾದನೆ ಮಾಡಿದ್ದ ಬಿಜೆಪಿಯ ಮುಖಂಡರು ಸಿಬಿಐ ವರದಿ ಬಹಿರಂಗವಾದ ಬಳಿಕ ತುಟಿ ಬಿಚ್ಚುತ್ತಿಲ್ಲ. ಕರಾವಳಿ ಭಾಗದಲ್ಲಿ ಈ ವಿಚಾರವನ್ನು ಮುನ್ನಲೆಯಲ್ಲಿ ಇಟ್ಟುಕೊಂಡು ಜನರಿಗೆ ಯಾತ್ರೆ ಮೂಲಕ ಬಿಜೆಪಿಯ ಸುಳ್ಳುಗಳನ್ನು ತಿಳಿಸುತ್ತೇವೆ.
ಬಿಜೆಪಿಯು ಕೋಮುವಾದದ ಬಗ್ಗೆ ಮಾತನಾಡಿದರೆ ನಾವು ಕರಾವಳಿ, ಮಲೆನಾಡಿನ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇವೆ. ಅವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟರೆ ನಾವು ಕರಾವಳಿಯನ್ನು ಐಟಿ, ಗಾರ್ಮೆಂಟ್ ಹಬ್ ಮಾಡುವ ಬಗ್ಗೆ ಮಾತನಾಡುತ್ತೇವೆ, ಅವರು ಯಾವ ಬಟ್ಟೆ ಧರಿಸಬೇಕು, ಯಾವ ಆಹಾರ ಸೇವಿಸಬೇಕು ಎಂದು ಮಾತನಾಡಿದರೆ ನಾವು ನಿರುದ್ಯೋಗ ನಿವಾರಣೆಯ ಬಗ್ಗೆ ಮಾತನಾಡುತ್ತೇವೆ. ಕರಾವಳಿ ಕುರಿತು ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆ ಯಾವುದೂ ಈಡೇರಿಸಿಲ್ಲ. ಇದನ್ನೂ ಜನರ ಬಳಿ ಕೊಂಡೊಯ್ಯುತ್ತೇವೆ ಎಂದು ಸುರ್ಜೇವಾಲಾ ಹೇಳಿದರು.
ಸೂಕ್ಷ್ಮ ಕಮ್ಯುನಿಟಿ ಅಭಿವೃದ್ಧಿ ಬೋರ್ಡ್ ರಚನೆ: ಇದುವರೆಗೂ ಅತಿ ಸಣ್ಣ ಸಮುದಾಯಗಳನ್ನು ಗುರುತಿಸಲಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅತಿ ಸಣ್ಣ ಸಮುದಾಯಗಳಾದ ಗಟ್ಟಿ, ಕುಲಾಲ್, ಆಚಾರ್ಯ, ಮಡಿವಾಳ, ದೇವಾಡಿಗ, ಕೊಟ್ಟಾರಿ, ಶೇರಿಗಾರ್, ಕುಡುಬಿ ಇತ್ಯಾದಿ ಸಮುದಾಯಗಳಿಗೆ ಇದೇ ಮೊದಲ ಬಾರಿಗೆ ‘ಸೂಕ್ಷ್ಮ ಕಮ್ಯುನಿಟಿ ಅಭಿವೃದ್ಧಿ ಬೋರ್ಡ್’ ರಚನೆ ಮಾಡಿ ಅವರ ಅಭಿವೃದ್ಧಿಗೆ 250 ಕೋಟಿ ರೂ. ಅನುದಾನ ಆರಂಭದಲ್ಲೇ ಮೀಸಲಿಡಲಾಗುತ್ತದೆ. ಅಲ್ಲದೆ, ಜೈನ, ಕ್ರೈಸ್ತರ ಕೆಲವು ಸಮುದಾಯಗಳಿಗೆ ಅಲ್ಪಸಂಖ್ಯಾತರ ನಿಧಿಯಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
ಚುನಾವಣಾ ಆಯೋಗವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು: ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಮತದಾರರನ್ನು ಆರು ಸಾವಿರ ರೂ.ಗೆ ಖರೀದಿಸುವ ಹೇಳಿಕೆ ನೀಡಿ ಸಂವಿಧಾನವನ್ನೇ ಅಣಕ ಮಾಡಿದ್ದಾರೆ. ಪ್ರತಿಯೊಬ್ಬ ಮತದಾರರಿಗೆ 6 ಸಾವಿರ ರೂ. ನೀಡಲು ಎಲ್ಲಿಂದ ಹಣ ಬರುತ್ತದೆ?. 40 ಪರ್ಸೆಂಟ್ ಕಮಿಷನ್ ದಂಧೆಯಿಂದ ಬರುತ್ತಿದೆಯಾ? ಚುನಾವಣಾ ಆಯೋಗವು ತಕ್ಷಣ ರಮೇಶ್ ಜಾರಕಿಹೊಳಿ, ಜೆಪಿ ನಡ್ಡಾ, ನಳಿನ್ ಕುಮಾರ್ ಕಟೀಲು, ಸಿಎಂ ಬೊಮ್ಮಾಯಿ ವಿರುದ್ಧ ಪ್ರಕರಣ ದಾಖಲಿಸಬೇಕು. ಐಪಿಸಿ ಸೆಕ್ಷನ್ ಅಡಿಯಲ್ಲಿ ಇವರನ್ನು ಬಂಧಿಸಬೇಕು. ಜನತಾ ನ್ಯಾಯಾಲಯದಲ್ಲೂ ಇವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ವಿಪಕ್ಷ ಉಪನಾಯಕ ಯು.ಟಿ. ಖಾದರ್, ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ವಿನಯ ಕುಮಾರ್ ಸೊರಕೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಇದನ್ನೂ ಓದಿ:ಪರೇಶ್ ಮೇಸ್ತಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಆರೋಪ.. ಜನಜಾಗೃತಿಗೆ ಮುಂದಾದ ಕಾಂಗ್ರೆಸ್