ಮಂಗಳೂರು : ಭಾರತ ಬಹುತ್ವದ ಜಾತ್ಯಾತೀತತೆಯ ಶ್ರೀಮಂತಿಕೆ ಉಳ್ಳ ರಾಷ್ಟ್ರ. ಆದರೆ, ಇಂತಹ ಗೌರವಕ್ಕೆ ಚ್ಯುತಿ ತರುವ ಕೆಲಸ ಆಗುತ್ತಿದೆ. ಜಾತ್ಯಾತೀತ ಮನೋಧರ್ಮದಿಂದ ಸಾಮರಸ್ಯ ಬಗ್ಗೆ ಮಾತನಾಡದಂತಾಗಿದೆ. ಹಿಂದೂ ಧರ್ಮೀಯ, ಮುಸ್ಲಿಂ ಧರ್ಮವನ್ನು ದ್ವೇಷ ಮಾಡಿದ್ರೆ ಮಾತ್ರ ಆತ ಹಿಂದೂ. ಇನ್ನೊಂದು ಧರ್ಮವನ್ನು ಪ್ರೀತಿ ಮಾಡಿದರೆ ಹಿಂದೂ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲಾಗುತ್ತಿದೆ ಎಂದು ಮಾಜಿ ಸಚಿವ ರಾಮನಾಥ್ ರೈ ಕಳವಳ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯನ್ನು ಮತೀಯ ಪ್ರಯೋಗಾಲಯ ಮಾಡುವ ಉದ್ದೇಶ ಹೊಂದಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂದರು.
ಚರ್ಚ್ ದಾಳಿ, ಗೊರಟ್ಟೋ ದಾಳಿಯಾದಾಗಲೂ ಕ್ರೈಸ್ತರು ಪ್ರಚೋದನೆಗೆ ಒಳಪಡಲಿಲ್ಲ. ಆದರೆ, ಬಿಜೆಪಿಗರಿಗೆ ಮಾತ್ರ ಕ್ರೈಸ್ತರು ಪ್ರಚೋದನೆಗೆ ಒಳಪಟ್ಟು ಬೀದಿಗಿಳಿಯಬೇಕು. ಅವರಿಗೆ ರಾಜಕೀಯವಾಗಿ ಬಳಸುವ ಹುನ್ನಾರವಿದೆ. ಅಮೆರಿಕಾದಲ್ಲಿ ಪುತ್ತಿಗೆ ಮಠದ ದೇವಾಲಯವನ್ನು ಶಿಲುಬೆಯನ್ನು ತೆಗೆದು ಕಟ್ಟಲಾಗಿದೆ. ಬಸವಣ್ಣನ ಮೂರ್ತಿ ಲಂಡನ್‌ನಲ್ಲಿ ಸ್ಥಾಪನೆ ಆಗುತ್ತದೆ. ಆದರೂ ಕ್ರೈಸ್ತರಿಂದ ಪ್ರತಿಭಟನೆ ವ್ಯಕ್ತವಾಗಲಿಲ್ಲ ಎಂದರು.
ಕಲ್ಲಡ್ಕ ಶಾಲೆಗೆ ದೇವಸ್ಥಾನದಿಂದ ಚೆಕ್ ಮೂಲಕ ಹಣ:ಕಲ್ಲಡ್ಕ ಶ್ರೀರಾಮ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಒಂದು ಕೆಜಿ ಅಕ್ಕಿಯೂ ಹೋಗಿಲ್ಲ. ಆದರೆ, ಚೆಕ್ ಮುಖಾಂತರ ತಿಂಗಳಿಗೆ ನಾಲ್ಕು ಲಕ್ಷ ರೂ.ನಂತೆ ಹಣ ಪಡೆದು ದೇವಳದ ಹಣವನ್ನು ದುರುಪಯೋಗ ಮಾಡಲಾಗಿದೆ. ಅಲ್ಲಿಂದ ಬರುವ ಅಕ್ಕಿಯನ್ನು ತಾನು ನಿಲ್ಲಿಸಿದ್ದೇನೆ ಎಂದು ಎಲ್ಲರನ್ನೂ ಮೋಸಗೊಳಿಸುತ್ತಿದ್ದಾರೆ. ಈ ಮೂಲಕ ಸಮಾಜ ವಿಭಜನೆ ಮಾಡುವ ಧರ್ಮ ಧ್ರುವೀಕರಣ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡುವ ವಿಚಾರದಲ್ಲಿ ನನಗೇನು ತಿಳಿದಿಲ್ಲ. ಬಿಜೆಪಿ ಲಾಭ ನಷ್ಟ ಲೆಕ್ಕ ಹಾಕಿ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಲಾಭ ಇದೆಯಾದರೆ ಬ್ಯಾನ್ ಮಾಡಬಹುದು ಎಂದು ಹೇಳಿದರು.