ಮಂಗಳೂರು: ನಗರದ ಬಟ್ಟಂಪಾಡಿಯ ಅರಬ್ಬಿ ಸಮುದ್ರ ತೀರದಲ್ಲಿ ಮುಳುಗಡೆಯಾಗಿರುವ ಸಿರಿಯಾ ದೇಶದ ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ಗುಜರಾತ್ನ ಪೋರ ಬಂದರಿನಿಂದ 'ಸಮುದ್ರ ಪಾವಕ್' ಎಂಬ ವಿಶೇಷ ತಂತ್ರಜ್ಞ ಹಡಗು ಶನಿವಾರ ಆಗಮಿಸಿದೆ.
5.2ನಾಟಿಕಲ್ ದೂರದಲ್ಲಿ ಭಾಗಶಃ ಮುಳುಗಡೆಗೊಂಡಿರುವ ಸಿರಿಯಾ ದೇಶದ ವಿ.ಎಸ್. ಪ್ರಿನ್ಸೆನ್ಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆಯ ಭೀತಿಯ ಹಿನ್ನೆಲೆಯಲ್ಲಿ ಗುಜರಾತ್ ನಿಂದ ಈ ಹಡಗನ್ನು ಇರಿಸಲಾಗಿದೆ.
'ಸಮುದ್ರ ಪಾವಕ್' ಸುಸಜ್ಜಿತವಾದ ಮಾಲಿನ್ಯ ನಿಯಂತ್ರಣ ಮಾಡುವ ಹಡಗಾಗಿದೆ. ಇದನ್ನು ಬಳಸಿಕೊಂಡು ಹೆಲಿಕಾಪ್ಟರ್ ಅಥವಾ ಇತರ ಹಡಗುಗಳ ನೆರವಿನಿಂದ ಸಮುದ್ರದಲ್ಲಿ ಮುಳುಗಿರುವ ಸಿರಿಯಾ ದೇಶದ ಹಡಗಿನಿಂದ ತೈಲ ಹೊರತೆಗೆಯಲು ಪ್ರಯತ್ನ ಮಾಡಲಾಗುತ್ತದೆ. ಸಮುದ್ರ ಪಾವಕ್ ಹಡಗು ಇದೀಗ ಮುಳುಗಡೆಯಾಗಿರುವ ಸಿರಿಯಾ ದೇಶದ ವಿ.ಎಸ್. ಪ್ರಿನ್ಸೆನ್ಸ್ ಮಿರಾಲ್ ಹಡಗಿನ ಪಕ್ಕದಲ್ಲಿಯೇ ಲಂಗರು ಹಾಕಿದೆ. ಇಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿ 150 ಮೆಟ್ರಿಕ್ ಟನ್ ತೈಲ ಹೊರಚೆಲ್ಲುವ ಬಗ್ಗೆ ಯೋಜನೆ ರೂಪಿಸುತ್ತಿದೆ.
ಸಮುದ್ರ ಪಕ್ಷುಬ್ಧಗೊಂಡು ಹಡಗು ಸಂಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆಯಾಗುವ ಭೀತಿಯಿದೆ. ಆದರೆ, ಹಡಗಿನಿಂದ ತಳದಲ್ಲಿ ಭೂಮಿಯಂತಹ ಪ್ರದೇಶ ಸಿಕ್ಕಿರುವುದರಿಂದ ಪೂರ್ಣ ಮುಳುಗಡೆಯಾಗಿಲ್ಲ. ಇದರ ನಡುವೆ ತೈಲವನ್ನು ಹೊರತೆಗೆಯುವ ಪ್ರಯತ್ನ ಮಾಡಲಾಗುತ್ತದೆ.