ಮಂಗಳೂರು: ಹುಟ್ಟುವಾಗಲೇ ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಚನಾ ಅದಕ್ಕಾಗಿ ಐದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ಬರೋಬ್ಬರಿ 6 ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ, ಇದ್ಯಾವುದೂ ಓದಿಗೆ ಅಡ್ಡಿಯಾಗಲಿಲ್ಲ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳಿಸಿರುವ ಸಿಂಚನಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಈ ವಿದ್ಯಾರ್ಥಿನಿ ತಮ್ಮ ಈ ಅಸಾಮಾನ್ಯ ಸಾಧನೆಯಿಂದ ಊರಿಗೆ ಹೆಮ್ಮೆ ತಂದಿದ್ದಾರೆ. ಛಲವಿದ್ದರೆ ಯಾವ ದೈಹಿಕ ನ್ಯೂನ್ಯತೆಯೂ ಅಡ್ಡಿಯಾಗೋದಿಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
6 ಬಾರಿ ಶಸ್ತ್ರ ಚಿಕಿತ್ಸೆಗೊಳಗಾದ ಸಿಂಚನಾ 624 ಅಂಕ ಪಡೆದು ರಾಜ್ಯಕ್ಕೇ ದ್ವಿತೀಯ ಪುತ್ತೂರಿನ ಕೋಡಂಕೇರಿ ಬಂಗಾರಡ್ಕ ನಿವಾಸಿ ಕೃಷಿಕ ಮುರಳೀಧರ್ ಮತ್ತು ಶೋಭಾ ದಂಪತಿಯ ಮೂವರು ಮಕ್ಕಳಲ್ಲಿ ಸಿಂಚನಾ ಲಕ್ಷ್ಮಿ ಎರಡನೇಯವರು. ಹುಟ್ಟುವಾಗಲೇ ಸ್ಕೋಲಿಯೋಸಿಸ್ ಎಂಬ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಚನಾರ ಚಿಕಿತ್ಸೆಗಾಗಿ ಅವರ ತಂದೆ ಮುರಳೀಧರ ಈಗಾಗಲೇ 25 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ.
ಸಿಂಚನಾ ಸಾಧನೆಯ ಬಗ್ಗೆ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ರೈ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಂಚನಾ ಲಕ್ಷ್ಮಿಗೆ ಈ ಸಾಧನೆ ಮಾಡಲು ಅವಳಲ್ಲಿ ಸಾಮರ್ಥ್ಯವಿತ್ತು. ಅದಕ್ಕೆ ಸಿಕ್ಕಿದ ಪುರಸ್ಕಾರವಿದು ಎಂದು ಭಾವಿಸುವೆ. ಓದು ಒಂದೇ ಅಲ್ಲ, ಕ್ರೀಡೆ ಒಂದು ಬಿಟ್ಟು ಇತರ ಎಲ್ಲಾ ಕಲೆಗಳಲ್ಲಿ ಅವಳು ಉತ್ತಮವಾಗಿ ತನ್ನ ಪ್ರದರ್ಶನವನ್ನು ತೋರುತ್ತಿದ್ದಳು. ಸಿಂಚನಾಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅವಳಿಗಿಂತ ಹಿಂದೆ ಇರುವ ವಿದ್ಯಾರ್ಥಿಗಳನ್ನು ಮುಂದೆ ತರುವಲ್ಲಿ ಶ್ರಮ ವಹಿಸಿದ್ದಾಳೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.