ಕರ್ನಾಟಕ

karnataka

ETV Bharat / state

ಮಂಗಳೂರು: ಪಿಂಚಣಿ ಉಪದಾನ ಪತ್ರಕ್ಕೆ 20 ಲಕ್ಷ ಲಂಚ ಕೇಳಿದ ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ - bribery case in mangaluru

ಮಂಗಳೂರಿನಲ್ಲಿ ಪಿಂಚಣಿ ಉಪದಾನ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಅನುದಾನಿತ ಶಾಲೆಯ ಸಂಚಾಲಕಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

school-administrator-detained-by-lokayukta-in-bribery-case-in-mangaluru
ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ

By

Published : Jul 7, 2023, 7:21 PM IST

ಮಂಗಳೂರು:ವಯೋ ನಿವೃತ್ತಿ ಹೊಂದಲಿರುವ ಮುಖ್ಯ ಶಿಕ್ಷಕಿಗೆ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಲು 20 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಅನುದಾನಿತ ಶಾಲೆಯ ಸಂಚಾಲಕಿ ಐದು ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಂಗಳೂರು ತಾಲೂಕಿನ ಬಜ್ಪೆ ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೋಭಾರಾಣಿ ಎಂಬುವರು ಶಿಕ್ಷಕಿ ಹಾಗೂ ಸದ್ಯ ಮುಖ್ಯ ಶಿಕ್ಷಕಿಯಾಗಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜುಲೈ 31ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಅವರು ತಮ್ಮ ವಯೋನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ಮೇ 25ರಂದು ಶಾಲೆಯ ಮ್ಯಾನೇಜ್‌ಮೆಂಟ್‌ನ ಸಂಚಾಲಕರಾದ ಜ್ಯೋತಿ ಎನ್. ಪೂಜಾರಿ ಅವರಿಗೆ ಮನವಿ ಪತ್ರದೊಂದಿಗೆ ವಿನಂತಿಸಿಕೊಂಡು ಸ್ವೀಕೃತಿಯನ್ನು ನೀಡುವಂತೆ ಕೋರಿದ್ದರು.

ಆದರೆ ಸಂಚಾಲಕರಾದ ಜ್ಯೋತಿ.ಎನ್. ಪೂಜಾರಿ ಅವರು ಸ್ವೀಕೃತಿಯನ್ನು ನಂತರ ನೀಡುವುದಾಗಿ ತಿಳಿಸಿ, ಪಿಂಚಣಿ ಉಪದಾನ ಪತ್ರಗಳನ್ನು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸದೇ, ಸ್ವೀಕೃತಿ ಪತ್ರವನ್ನು ನೀಡದೇ ಶೋಭಾರಾಣಿ ಅವರಿಗೆ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕಳುಹಿಸಬೇಕಾದರೆ ರೂಪಾಯಿ 20 ಲಕ್ಷ ಲಂಚ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆ ನಂತರ ಪುನಃ ಶೋಭಾರಾಣಿ ಅವರು ಜುಲೈ 5ರಂದು ವಾಪಸ್​​ ಮ್ಯಾನೇಜ್‌ಮೆಂಟ್‌ನ ಸಂಚಾಲಕರ ವಾಸದ ಮನೆ ಬಳಿ ಹೋಗಿ ಸಂಚಾಲಕರಾದ ಜ್ಯೋತಿ ಎನ್. ಪೂಜಾರಿ ಅವರನ್ನು ಭೇಟಿ ಮಾಡಿ ತನ್ನ ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡಿ ಕಳುಹಿಸಿಕೊಡುವಂತೆ ಕೋರಿದ್ದಾರೆ. ಆಗ ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡುವಾಗಲೇ ಜ್ಯೋತಿ ಅವರು 5 ಲಕ್ಷ ರೂಪಾಯಿ ಕೊಡುವಂತೆ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಗುರುವಾರ ಶಾಲೆಯ ಮ್ಯಾನೇಜ್‌ಮೆಂಟ್‌ನ ಸಂಚಾಲಕಿ ಜ್ಯೋತಿ ಅವರು ಶೋಭಾರಾಣಿರಿಂದ 5 ಲಕ್ಷ ರೂಪಾಯಿ ಹಣವನ್ನು ಲಂಚವಾಗಿ ಸ್ವೀಕರಿಸುವಾಗ ಸ್ಥಳದಲ್ಲಿಯೇ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿ ಜ್ಯೋತಿ ಎನ್ ಪೂಜಾರಿಯನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ಲಂಚದ ಹಣ ವಶಪಡಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.

ಮಂಗಳೂರು ಲೋಕಾಯುಕ್ತ ಎಸ್​ಪಿ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಕಲಾವತಿ. ಕೆ, ಚಲುವರಾಜು ಬಿ. ಹಾಗೂ ಪೊಲೀಸ್ ನಿರೀಕ್ಷಕರಾದ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.

ಇದನ್ನೂ ಓದಿ :Doctor suspended: ರೋಗಿಗಳಿಂದ ಲಂಚ ಪಡೆದ ಆರೋಪ: ಮೈಸೂರಲ್ಲಿ ಮಹಿಳಾ ವೈದ್ಯಾಧಿಕಾರಿ ಅಮಾನತು

ABOUT THE AUTHOR

...view details