ಬಂಟ್ವಾಳ(ದಕ್ಷಿಣ ಕನ್ನಡ):ಅಯೋಧ್ಯೆಯಲ್ಲಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದು, ಇದರ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಮಧ್ಯೆ 21ರಂದು ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಲು ರಾಮಭಕ್ತರೊಬ್ಬರು ಸಿದ್ಧತೆ ಮಾಡಿಕೊಂಡಿದ್ದಾರೆ.
ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಹಾಗೂ ಅಯೋಧ್ಯೆ ಕರಸೇವೆಯಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ಎ.ಗೋವಿಂದ ಪ್ರಭು ಅವರು ಈ ತಯಾರಿ ನಡೆಸುತ್ತಿರುವರು. ಪ್ರಸ್ತುತ ಅಯೋಧ್ಯೆ ನೂತನ ಮಂದಿರದಲ್ಲಿ ಜ. 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಂಟ್ವಾಳದ ಗೋವಿಂದ ಪ್ರಭು ನೇತ್ರಾವತಿ ನದಿಯ ನೀರಿನ ಮಧ್ಯೆ ಶ್ರೀ ಸತ್ಯನಾರಾಯಣ ಪೂಜೆ ಮಾಡಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಜ.21ರ ರಾತ್ರಿ 7ರ ಬಳಿಕ ಈ ಪೂಜಾ ವಿಧಿಗಳು ನಡೆಯಲಿವೆ. ನದಿಯ ನೀರಿನ ಮಧ್ಯೆ ತೆಪ್ಪದ ಮಾದರಿ ರಚಿಸಿ ದೀಪಾರಾಧನೆಯ ಬೆಳಕಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಬಂಟ್ವಾಳ ಪುರಸಭಾ ಸದಸ್ಯ ಹಾಗೂ ಶ್ರೀರಾಮ ಭಕ್ತ ಎ.ಗೋವಿಂದ ಪ್ರಭು ನೇತೃತ್ವ ವಹಿಸಿದ್ದು, ತಮ್ಮ ಖರ್ಚಿನಲ್ಲಿ ಈ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.