ಬೆಳ್ತಂಗಡಿ(ದಕ್ಷಿಣ ಕನ್ನಡ):ಧರ್ಮದ ಮರ್ಮವನ್ನರಿತು ಬದುಕಿದರೆ ಮಾತ್ರ ಶಾಂತಿ, ಸಾಮರಸ್ಯದ ಜೀವನ ಸಾಧ್ಯ. ಎಲ್ಲ ಧರ್ಮಗಳ ಸಾರ ಬದುಕಿನಲ್ಲಿ ಶಾಂತಿ, ತೃಪ್ತಿ, ನೆಮ್ಮದಿ ಮತ್ತು ಸಂತೊಷ ನೀಡುವುದು ಆಗಿದೆ ಎಂದು ಖ್ಯಾತ ವಿದ್ವಾಂಸ ಗುರುರಾಜ ಕರ್ಜಗಿ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಿಮಿತ್ತ 91ನೇ ಸರ್ವಧರ್ಮ ಸಮ್ಮೇಳನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲೆಲ್ಲೂ ಧರ್ಮದ ಹೆಸರಿನಲ್ಲಿ ಹಿಂಸೆ ತಾಂಡವವಾಡುತ್ತಿದೆ. ಧರ್ಮದ ನೆಪದಲ್ಲಿ ಹಿಂಸೆ ಮತ್ತು ಭಯೋತ್ಪಾದನೆ ಸಲ್ಲದು. ಸರ್ವಧರ್ಮ ಸಮನ್ವಯದಿಂದ ಪವಿತ್ರತೆ, ಉದಾರತೆ ಮತ್ತು ಶಕ್ತಿವರ್ಧನೆಯೊಂದಿಗೆ ಸಾಮಾಜಿಕ ಸಾಮರಸ್ಯ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದಯುತ ಜೀವನ ನಡೆಸಬಹುದು. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನ ಮಾಡಿದರೆ ಧರ್ಮದ ತತ್ವಗಳನ್ನೂ ರಕ್ಷಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.
ದೇವಸ್ಥಾನ, ವ್ಯಕ್ತಿಯ ಸಾಧನೆ ಮತ್ತು ಜನರ ಆಶಯ, ಅಪೇಕ್ಷೆಗಳ ಈಡೇರಿಕೆಯಿಂದ ಯಾವುದೇ ಕ್ಷೇತ್ರ ಪವಿತ್ರ ತೀರ್ಥಕ್ಷೇತ್ರವಾಗಿ ಬೆಳೆಯುತ್ತದೆ ಬೆಳಗುತ್ತದೆ. ಶ್ರೀ ಮಂಜುನಾಥ ಸ್ವಾಮಿ ಮತ್ತು ಧರ್ಮ ದೇವತೆಗಳ ಸಾನ್ನಿಧ್ಯ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಾಧನೆ ಮತ್ತು ಬಹುಮುಖಿ ಸಮಾಜ ಸೇವಾಕಾರ್ಯಗಳಿಂದಾಗಿ ಧರ್ಮಸ್ಥಳ ಇಂದು ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹಾಗೂ ಗೌರವ ಹೊಂದಿದೆ ಎಂದು ಶ್ಲಾಘಿಸಿದರು.
ಮಾನವ ಕಲ್ಯಾಣವೇ ಧರ್ಮದ ಧ್ಯೇಯ: ವೀರೇಂದ್ರ ಹೆಗ್ಗಡೆ-ಧರ್ಮವು ಶಾಶ್ವತ ಮತ್ತು ನಿತ್ಯವಾದುದು. ಕಾಮ, ಭಯ, ಲೋಭ ಮತ್ತು ಬದುಕುವ ಉದ್ದೇಶ ಮತ್ತಿತರ ಯಾವುದೇ ಕಾರಣಕ್ಕಾಗಿಯೂ ಧರ್ಮವನ್ನು ತ್ಯಜಿಸಬಾರದು. ನಮ್ಮ ಸಾರ್ಥಕ ಬದುಕಿಗೆ ಬೆಳಕು ನೀಡಿ ದಾರಿ ತೋರಿಸುವ ಸಾಧನವನ್ನು “ಧರ್ಮ” ಎನ್ನತ್ತೇವೆ. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿಯಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ವಿಶ್ವದಲ್ಲಿ ಅನೇಕ ಧರ್ಮಗಳಿದ್ದು ಅವುಗಳ ಆಚರಣೆ, ಕ್ರಿಯೆ ಹಾಗೂ ಸ್ವರೂಪದಲ್ಲಿ ವ್ಯತ್ಯಾಸ ಇದ್ದರೂ ಅಂತಿಮ ಗುರಿ ಮಾನವ ಜನಾಂಗದ ಕಲ್ಯಾಣವೇ ಆಗಿದೆ. ದೇಶದಲ್ಲಿ ಕಾಲಕಾಲಕ್ಕೆ ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಏರಪೇರುಗಳಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ಧರ್ಮವು ನಿರಂತರತೆ ಕಾಯ್ದುಕೊಳ್ಳುವುದೇ ಸವಾಲಾಗಿದೆ. ಆದರೆ, ಧರ್ಮಸ್ಥಳದಲ್ಲಿ ಬದ್ಧತೆಯಿಂದ, ಪ್ರಾಮಾಣಿಕವಾಗಿ ಕೋವಿಡ್ ಸಂದರ್ಭಗಳಲ್ಲಿ ಕೂಡಾ ಧರ್ಮದಲ್ಲಿ ನಿರಂತರತೆ ಕಾಯ್ದುಕೊಂಡು ಯಶಸ್ವಿಯಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.