ಕರ್ನಾಟಕ

karnataka

ETV Bharat / state

ದ.ಕ.ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಕಟ್ಟಡ ಕಾಮಗಾರಿ ಸ್ಥಗಿತ: ಎಚ್ಚರಿಕೆ - ಮರಳು ಸಮಸ್ಯೆ

ದ.ಕ.ಜಿಲ್ಲೆಯಲ್ಲಿ ಕಳೆದ 11 ತಿಂಗಳಿನಿಂದ ಮರಳು ಅಭಾವ ತಲೆದೋರಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ನವೀನ್ ಕರ್ಡೋಝಾ ತಿಳಿಸಿದ್ದಾರೆ.

Mangalore
ಮಂಗಳೂರು

By

Published : Oct 8, 2020, 8:34 PM IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕಳೆದ 11 ತಿಂಗಳಿನಿಂದ ಮರಳಿನ ಅಭಾವ ತಲೆದೋರಿದ್ದು, ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ ಆದ್ದರಿಂದ ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ಸ್ಥಗಿತಗೊಳಿಸುವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅಖಿಲ ಭಾರತ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್​ ಅಧ್ಯಕ್ಷ ವಿಜಯವಿಷ್ಣು ಮಯ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶನಿವಾರ ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅವರು ಈ ಬಗ್ಗೆ ಸಭೆಯೊಂದನ್ನು‌ ಕರೆದಿದ್ದು, ಅಲ್ಲೂ ಸಮಸ್ಯೆ ಬಗೆಹರಿಯದಿದ್ದಲ್ಲಿ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಸಹಿತ ಹಲವು ಸಂಘಟನೆಗಳು ಜಂಟಿಯಾಗಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು‌ ಆಗ್ರಹಿಸಿದರು.

ದ.ಕ.ಜಿಲ್ಲೆಯಲ್ಲಿ ಮರಳು ಸಮಸ್ಯೆ

ಕೊರೊನಾ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವ ಗುತ್ತಿಗೆದಾರರು, ಇಂಜಿನಿಯರ್​ಗಳಿಗೆ, ಸ್ಟೀಲ್, ಸಿಮೆಂಟ್ ವ್ಯಾಪಾರಿಗಳಿಗೆ ಅತೀ ಹೆಚ್ಚಿನ ಹೊಡೆತ ಬಿದ್ದಿದೆ.‌ ದ.ಕ.ಜಿಲ್ಲೆಯಲ್ಲಿ ಹಗಲು ಹೊತ್ತಿನಲ್ಲಿ ಮರಳು ಲಭ್ಯವಾಗದಿದ್ದರೂ, ರಾತ್ರೋರಾತ್ರಿ ಕಾನೂನು ಬಾಹಿರವಾಗಿ ಎಷ್ಟು ಬೇಕಾದರೂ ಮರಳು ಸಿಗುತ್ತದೆ. ಅಕ್ಟೋಬರ್​ಗೆ ಮರಳು ಪರವಾನಿಗೆಯ ತಾತ್ಕಾಲಿಕ ನವೀಕರಣ ಮಾಡಬೇಕಿತ್ತು, ಈ ಬಗ್ಗೆ ಒಂದು ಸಭೆ ನಡೆಸಬೇಕಿತ್ತು. ಆದರೆ ಇನ್ನೂ ಆ ಕೆಲಸ ಆಗಿಲ್ಲ. ಇದಕ್ಕೆ ಅಧಿಕಾರಿಗಳ ಉದಾಸೀನತೆ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ವಿಜಯವಿಷ್ಣು ಮಯ್ಯ ಆರೋಪಿಸಿದರು.

2010ಕ್ಕೆ ದ.ಕ.ಜಿಲ್ಲೆಯಲ್ಲಿ ಯುನಿಟ್ ಗೆ 310 ರೂ. ಇದ್ದ ಮರಳಿಗೆ ಈಗ 4,500 ಸಾವಿರ ರೂ. ಆಗಿದೆ. ಖರ್ಚುವೆಚ್ಚಗಳಿದ್ದರೂ 10 ವರ್ಷಗಳಲ್ಲಿ 150 ಪಟ್ಟು ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ನಾವು ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಲ್ಲಿ‌‌ 100 ಕನಿಷ್ಠ ಕೈಗಾರಿಕೆಗಳು ತೊಂದರೆಗೆ ಸಿಲುಕಲಿವೆ ಎಂದು ಹೇಳಿದರು.

ಕ್ರೆಡಾಯಿ ಅಧ್ಯಕ್ಷ ನವೀನ್ ಕರ್ಡೋಝಾ ಮಾತನಾಡಿ, ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅವರು ಅಕ್ಟೋಬರ್ 10 ರಂದು ಈ ಬಗ್ಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದ್ದಾರೆ. ಆ ಬಳಿಕವೂ ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ನವೀನ್ ಕರ್ಡೋಝಾ ಹೇಳಿದರು.

ABOUT THE AUTHOR

...view details