ಮಂಗಳೂರು :ರಾಜ್ಯ ಸರ್ಕಾರದ ಅವಸರದಿಂದ ವಿಧಾನ ಪರಿಷತ್ನಲ್ಲಿ ಉಪಸಭಾಪತಿಯವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಲಾಗಿತ್ತು. ಆ ಬಳಿಕದ ಘಟನೆಯಿಂದ ಉಪಸಭಾಪತಿ ಧರ್ಮೇಗೌಡ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದ್ದರಿಂದ ಅಂದಿನ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ವಿಧಾನ ಪರಿಷತ್ ಕಲಾಪ ನಡೆಸಬೇಕೆಂಬ ತರಾತುರಿ ಏನಿತ್ತು?. ಅಲ್ಲದೆ ಉಪ ಸಭಾಪತಿಯವರನ್ನು ಬಲವಂತವಾಗಿ ಸಭಾಪತಿ ಸ್ಥಾನದಲ್ಲಿ ಕೂರಿಸಿದ್ದು ತಪ್ಪು. ಜೊತೆಗೆ ಸಭಾಪತಿಯವರನ್ನು ವಿಧಾನ ಪರಿಷತ್ ಒಳಗೆ ಬರಲು ಬಿಡದೆ ಬಾಗಿಲು ಮುಚ್ಚಿದ್ದು ತಪ್ಪು. ಇಂತಹ ಘಟನೆ ಇಡೀ ದೇಶದಲ್ಲಿ ಎಲ್ಲೂ ನಡೆದಿರಲಿಕ್ಕಿಲ್ಲ ಎಂದರು.
ಮುಂದಿನ 15 ದಿನಗಳಲ್ಲಿ ಕ್ಯಾಬಿನೆಟ್ ಸಭೆಯನ್ನು ಕರೆಯಬಹುದಿತ್ತು. ಸಭಾಪತಿಯವರು ಬರಬಾರದೆಂದು ಉಪ ಮುಖ್ಯಮಂತ್ರಿಯವರು ಸಭಾಪತಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಮುಂದೆ ನಡೆದ ಘಟನೆಗಳು ಆಗಬಾರದಿತ್ತು. ಆದರೆ, ನಡೆದು ಹೋಗಿದೆ. ಜನರು ನಮ್ಮನ್ನು ನೋಡುತ್ತಿದ್ದಾರೆ. ಆದ್ದರಿಂದ ನಮ್ಮನ್ನು ನಾವೇ ಸುಧಾರಿಸಿಕೊಂಡು ಹೋಗಬೇಕು ಎಂದು ಸಲೀಂ ಅಹ್ಮದ್ ಹೇಳಿದರು.