ಸುಳ್ಯ: ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ, ಎರಡು ಗೋಣಿ ಚೀಲಗಳಲ್ಲಿ ಸುಮಾರು 31.424 ಕೆಜಿ ಗಳಷ್ಟು ತೂಕದ 40 ಗಂಧದ ಹಸಿ ಕೊರಡುಗಳನ್ನು ಮತ್ತು 3 ಚಕ್ಕೆಗಳನ್ನು, ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಶ್ರೀಗಂಧ ಸಾಗಣೆ: ಸುಳ್ಯದಲ್ಲಿ ಮೂವರು ಆರೋಪಿಗಳು ಅಂದರ್ - latest mangalore news
ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಈ ಸಂಬಂಧ ಮೂವರನ್ನು ಬಂಧಿಸಿ, ಅವರಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಮಧ್ಯಾಹ್ನ ತಾಲೂಕಿನ ಜಾಲ್ಸೂರು ಎಂಬಲ್ಲಿ ಸುಳ್ಯ ಪೊಲೀಸರು ಮಡಿಕೇರಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎ-55, ಎಂ-0314 ಮಾರುತಿ ಆಲ್ಟೋ ಕಾರಿನಲ್ಲಿ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಗಳಾದ ಅಶ್ರಫ್ ಮತ್ತು ಉನೈಸ್ ಎಂಬುವರು ಯಾವುದೇ ಪರವಾನಿಗೆ ಇಲ್ಲದೆ ಶುಂಠಿಕೊಪ್ಪದ ಕೃಷ್ಣ ಕುಟ್ಟಿ ಎಂಬುನೊಂದಿಗೆ ಸೇರಿ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿ, 71(ಎ), 86,87 ಕರ್ನಾಟಕ ಅರಣ್ಯ ಕಾಯ್ದೆ-1963ಅಡಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ 65,000/- ಮತ್ತು ಕಾರಿನ ಅಂದಾಜು ಮೌಲ್ಯ ರೂ 75,000/- ಎಂದು ಅಂದಾಜಿಸಲಾಗಿದೆ.