ಪುತ್ತೂರು: ಕೋವಿಡ್ ಸೋಂಕು ನಿಯಂತ್ರಣ ಆಗುತ್ತಿರುವ ಸಂದರ್ಭದಲ್ಲಿ ಶಾಲೆಗಳ ಆರಂಭದ ಬಗ್ಗೆ ಸದ್ಯ ತೀರ್ಮಾನ ಮಾಡಿಲ್ಲ. ಈ ಕುರಿತು ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು.
ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣದ ಮಾಹಿತಿ ಪಡೆಯಲು ಕೇರಳ ಗಡಿ ಭಾಗದ ನೆಟ್ಟಣಿಗೆ ಮುಡ್ನೂರು ಪಳ್ಳತ್ತೂರಿಗೆ ಭೇಟಿ ನೀಡಿದ ಸಂದರ್ಭ ಪುತ್ತೂರು ದರ್ಬೆಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿ, ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ತಜ್ಞರ ವರದಿಯನ್ನು ಆಧರಿಸಿ ವೆನ್ಲಾಕ್ ಆಸ್ಪತ್ರೆಯಲ್ಲಿ 130 ವೆಂಟಿಲೇಟರ್ ಬೆಡ್ ಮತ್ತು ತಾಲೂಕು ಮಟ್ಟದಲ್ಲೂ ಸಿದ್ಧತೆ ನಡೆಸಲಾಗಿದೆ.
ಆದರೆ, ಪ್ರಸ್ತುತ ಪ್ರಕರಣಗಳು ನಿಯಂತ್ರಣದಲ್ಲಿದೆ. ಹಾಗೆಂದು ಶಾಲೆಗಳನ್ನು ಆರಂಭಿಸುವುದಕ್ಕೆ ತೀರ್ಮಾನ ಮಾಡಿಲ್ಲ. ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಒಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದರೆ ಸೋಂಕು ನಿಯಂತ್ರಣ: ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಲ್ಯಾಬ್ ಟೆಕ್ನಿಷಿಯನ್, ANM ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಗ್ಲೌಸ್, ಮಾಸ್ಕ್ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಉಪಕರಣಗಳು ಖರೀದಿಸಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಹಾಗಾಗಿ ಕೋವಿಡ್‌ಗೆ ನಿಯಂತ್ರಣಕ್ಕೆ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲ. ಕೋವಿಡ್ ಪ್ರಕರಣ ಜಾಸ್ತಿ ಇರುವ ಕಡೆ ಹೆಚ್ಚಾಗಿ ಹೋಮ್ ಐಸೋಲೇಷನ್ ಆಯ್ಕೆ ಮಾಡಿರುವುದು ಇಲ್ಲಿ ಸಮಸ್ಯೆ ತಂದಿದೆ. ಆದಷ್ಟು ಜನರು ಹೋಮ್ ಐಸೋಲೇಷನ್‌ನಿಂದ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದರೆ ಸೋಂಕು ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದು ಸಚಿವರು ತಿಳಿಸಿದರು.