ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಯ ಬಳಿಕ ಉಂಟಾದ ಆತಂಕದ ಬಳಿಕ ಕೆಲವು ವ್ಯಕ್ತಿಗಳು ಸುಳ್ಳು ಕಥೆ ಸೃಷ್ಟಿಸಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಇದೇ ರೀತಿ ಉಳ್ಳಾಲ ಮತ್ತು ಸುರತ್ಕಲ್ನಲ್ಲಿ ಹಲ್ಲೆಗೆ ಯತ್ನ ನಡಿದಿದೆ ಎಂಬ ವದಂತಿಯನ್ನು ಹಬ್ಬಿಸಲಾಗಿದೆ. ಇವುಗಳನ್ನು ನಂಬದಂತೆ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆ ಪ್ರಕರಣಗಳು ನಡೆದ ಬಳಿಕ ಜಿಲ್ಲೆಯಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಶ್ರಮಪಡುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡಿ ಆತಂಕ ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಜುಲೈ 30ರಂದು ಸುರತ್ಕಲ್ನ ಎಂಆರ್ಪಿಎಲ್ ಬಳಿ ಓರ್ವನ ಹಲ್ಲೆಗೆ ಯತ್ನ ನಡೆದಿತ್ತು ಎಂದು ವದಂತಿ ಹಬ್ಬಿತ್ತು. ಇಂದು ಬೆಳಗ್ಗೆ ಉಳ್ಳಾಲದಲ್ಲಿ ಹತ್ಯೆ ಮಾಡಲು ತಂಡ ಯತ್ನಿಸಿತ್ತು ಎಂದು ವ್ಯಕ್ತಿಯೊಬ್ಬ ಹೇಳಿ ಆತಂಕ ಸೃಷ್ಟಿಸಿದ್ದರು. ಇದು ಸ್ಥಳೀಯ ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಈ ವ್ಯಕ್ತಿ ಸುಳ್ಳು ಕಥೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಮಾತನಾಡಿದರು ಘಟನೆ ನಡೆದಿದೆ ಎನ್ನಲಾದ ಎಂಆರ್ಪಿಎಲ್ ಮತ್ತು ಉಳ್ಳಾಲದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಎರಡು ಘಟನೆಯು ಸುಳ್ಳು ಸೃಷ್ಟಿಯಾಗಿದೆ. ಇಂದು ಉಳ್ಳಾಲದಲ್ಲಿ ತನ್ನ ಕೊಲೆಗೆ ಯತ್ನಿಸಲಾಗಿದೆ ಎಂದ ಯುವಕನನ್ನು ವಿಚಾರಿಸಿದಾಗ ತನ್ನ ಮೇಲೆ ಹಲ್ಲೆ ನಡೆಯಬಹುದು ಎಂಬ ಆತಂಕದಲ್ಲಿ ಹೇಳಿದ್ದಾನೆ. ಆ ವ್ಯಕ್ತಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸಾರ್ವಜನಿಕರು ಪರಿಸ್ಥಿತಿ ಸಹಜಸ್ಥಿತಿಗೆ ಬರಲು ಶಾಂತಿ ಕಾಪಾಡಬೇಕು ಎಂದು ಹೇಳಿದರು.
ಓದಿ:ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ.. ಯಾರೆಲ್ಲ ಭಾಗಿ?