ಮಂಗಳೂರು:ನಕಲಿ ಬಿಲ್ ತಯಾರಿಸಿ ಸರ್ಕಾರಕ್ಕೆ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸದೇ 83 ಕೋಟಿ ರೂ.ಗಳಷ್ಟು ವಂಚನೆ ಎಸಗಿದ್ದಾರೆಂದು ಆರೋಪಿಸಿ ಮಂಗಳೂರಿನ ಕೇಂದ್ರೀಯ ಜಿಎಸ್‌ಟಿ ಕಮಿಷನರೇಟ್ ಈ ಸಂಬಂಧ ಇಬ್ಬರನ್ನು ಬಂಧಿಸಿದೆ.
ಮಂಗಳೂರಿನ ಗುಜರಿ ವ್ಯಾಪಾರಿ ಮೆ. ತೌಹೀದ್ ಸ್ಕ್ರೇಪ್ ಡೀಲರ್ನ ಪಿ.ಕೆ. ಅಬ್ದುಲ್ ರಹೀಂ ಮತ್ತು ಮೆ. ಎಂ.ಕೆ. ಟ್ರೇಡರ್ಸ್ನ ಮಾಲೀಕ ಅಬ್ದುಲ್ ಖಾದರ್ ಕೂಳೂರು ಚಾಯಬ್ಬ ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೆ ತೌಹೀದ್ ಸ್ಕ್ರೇಪ್ ಡೀಲರ್ ಮತ್ತು ಮೆ ಎಂ.ಕೆ. ಟ್ರೇಡರ್ಸ್ ಸಂಸ್ಥೆಗಳು ಬೇರೆ ಬೇರೆ ಸಂಸ್ಥೆಗಳಿಂದ ಸರಕು ಸಾಗಾಟಕ್ಕೆ ಸಂಬಂಧಿಸಿದಂತೆ ನಕಲಿ ಬಿಲ್‌ಗಳನ್ನು (ಇನ್‌ವಾಯ್ಸ್) ತಯಾರಿಸಿ ಅದರ ಆಧಾರದಲ್ಲಿ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದವು. ಹಾಗಾಗಿ ಇಲ್ಲಿ ನಿಜವಾಗಿಯೂ ಸರಕು ಸಾಗಾಟ ಆಗುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.