ಮಂಗಳೂರು:ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು, ರೈಲುಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್‌ಪಿಎಫ್ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದ ಧೋರುಪುರದ ಅಭಯ್‌ರಾಜ್ ಸಿಂಗ್ (26) ಮತ್ತು ರಾಜ್‌ಪುರದ ಹರಿಶಂಕರ್ ಗಿರಿ (25) ಬಂಧಿತ ಆರೋಪಿಗಳು.
ರಾತ್ರಿ ವೇಳೆ ಪ್ರಯಾಣಿಸಿ ಸಹ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಆರೋಪಿಗಳಿಬ್ಬರನ್ನು ರೈಲು ಸಂರಕ್ಷಣಾ ಪಡೆಯ (ಆರ್‌ಪಿಎಫ್) ಪೊಲೀಸರ ವಿಶೇಷ ತಂಡವು ಬಂಧಿಸಿದೆ. ಮಂಗಳೂರು ಮತ್ತು ಸುರತ್ಕಲ್ ನಡುವೆ ಸೆ. 28ರಂದು ಸಂಚರಿಸಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ ಕಳವಾಗಿತ್ತು. ಇಬ್ಬರು ಯುವಕರ ವರ್ತನೆ ಬಗ್ಗೆ ಸಂದೇಹ ಮೂಡಿದ್ದರಿಂದ ಅವರನ್ನು ಆರ್‌ಪಿಎಫ್ ಪೊಲೀಸರು ಅ.2ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರೈಲಿನಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದರು. ಆರ್ಪಿಎಫ್ನವರು ಆರೋಪಿಗಳನ್ನು ಮಂಗಳೂರು ರೈಲ್ವೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳು ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಚಿನ್ನಾಭರಣ ಧರಿಸಿರುವ ವೃದ್ಧರು ಹಾಗೂ ಮಹಿಳಾ ಪ್ರಯಾಣಿಕರನ್ನು ಗುರುತಿಸುತ್ತಿದ್ದರು. ರೈಲಿನ ವೇಗವು ಕಡಿಮೆ ಆದ ಸಂದರ್ಭದಲ್ಲಿ ಅವರ ಚಿನ್ನಾಭರಣಗಳನ್ನು ಕಿತ್ತುಕೊಂಡು, ಬೋಗಿಗಳಿಂದ ಹೊರಗೆ ಜಿಗಿದು ಪರಾರಿಯಾಗುತ್ತಿದ್ದರು. ಕೃತ್ಯಕ್ಕೆ ವಾರಾಂತ್ಯದಲ್ಲಿ ಚಲಿಸುವ ರೈಲುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.