ಕರ್ನಾಟಕ

karnataka

ETV Bharat / state

ರೌಡಿಶೀಟರ್ ಕೊಲೆಗೈದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ - life imprisonment for Rowdy sheeter murder accused

ನೀಲಯ್ಯನ ಕೊಲೆ ಮಾಡಲು ಮಡ್ಯಾರು ಎಂಬಲ್ಲಿ ತಲವಾರು ಹಿಡಿದು ಸಂತೋಷ್ ರೈ, ಸುಧಾಕರ, ಹಾಗೂ ಕೃಷ್ಣ ಪ್ರಸಾದ್ ರೈ ಕಾದು ಕುಳಿತಿದ್ದರು. ನೀಲಯ್ಯ ಕಾರಿನಲ್ಲಿ ಬರುತ್ತಿರುವಾಗಲೇ ಕಾರು ತಡೆದ ಮೂವರು ತಲವಾರಿನಿಂದ ನೀಲಯ್ಯನಿಗೆ 38 ಬಾರಿ ಇರಿದು ಕೊಲೆ ಮಾಡಿದ್ದರು.

rowdy-sheeter-murder-accused-sentenced-to-life-imprisonment
ರೌಡಿಶೀಟರ್ ಕೊಲೆಗೈದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

By

Published : Apr 1, 2021, 2:25 AM IST

ಮಂಗಳೂರು:ರೌಡಿಶೀಟರೋರ್ವನ ಕೊಲೆಗೈದ ಮೂವರು ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ನಗರದ ಕೋಟೆಕಾರು ನಿವಾಸಿಗಳಾದ ಸಂತೋಷ್ ರೈ(35), ಸುಧಾಕರ ಅಲಿಯಾಸ್ ಚಿದಾನಂದ (35) ಹಾಗೂ ತಲಪಾಡಿ ನಿವಾಸಿ ಕೃಷ್ಣ ಪ್ರಸಾದ್ ರೈ(52) ಜೀವಾವಧಿ ಶಿಕ್ಷೆಗೊಳಗಾದವರು. ಪ್ರಕರಣದಲ್ಲಿ ಒಳಸಂಚು ನಡೆಸಿರುವ ಕೋಟೆಕಾರಿನ ಕಿಶನ್(35) ಹಾಗೂ ಜಗದೀಶ್ (25) ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.

ಪ್ರಕರಣದ ವಿವರ:

ರೌಡಿಶೀಟರ್ ಆಗಿದ್ದ ಕೋಟೆಕಾರಿನ ನೀಲು ಅಲಿಯಾಸ್ ನೀಲಯ್ಯ ಪೂಜಾರಿ(33) ಎಂಬಾತ ಶಿಕ್ಷೆಗೊಳಗಾಗಿರುವ ಆರೋಪಿಗಳು ಹಾಗೂ ಒಳಸಂಚು ರೂಪಿಸಿರುವವರ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದ ಎಂದು ಎನ್ನಲಾಗಿದೆ. ಇದರಿಂದ ಆತನ ಕೊಲೆಗೆ ಸ್ಕೆಚ್ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ 2013ರ ಸೆಪ್ಟೆಂಬರ್‌ 4ರಂದು ರಾತ್ರಿ ನೀಲಯ್ಯ ಪೂಜಾರಿ ತನ್ನ ಆಲ್ಟೋ ಕಾರಿನಲ್ಲಿ‌ ಕೋಟೆಕಾರು ಬೀರಿಯಲ್ಲಿರುವ ಬಾರೊಂದಕ್ಕೆ ಊಟಕ್ಕೆ ಹೋಗಿದ್ದ. ಈ ಸಂದರ್ಭ ಆತನ ಜೊತೆಗಾರರಾದ ಸಂಪತ್, ನಿಶಾಂತ್ ಹಾಗೂ ನವೀನ್ ಎಂಬವರು ಬೈಕ್​ಗಳಲ್ಲಿ ಬಂದಿದ್ದರು.

ನೀಲಯ್ಯನ ಕೊಲೆ ಮಾಡಲು ಮಡ್ಯಾರು ಎಂಬಲ್ಲಿ ತಲವಾರು ಹಿಡಿದು ಸಂತೋಷ್ ರೈ, ಸುಧಾಕರ, ಹಾಗೂ ಕೃಷ್ಣ ಪ್ರಸಾದ್ ರೈ ಕಾದು ಕುಳಿತಿದ್ದರು. ನೀಲಯ್ಯ ಕಾರಿನಲ್ಲಿ ಬರುತ್ತಿರುವಾಗಲೇ ಕಾರು ತಡೆದ ಮೂವರು ತಲವಾರಿನಿಂದ ನೀಲಯ್ಯನಿಗೆ 38 ಬಾರಿ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನೀಲಯ್ಯನನ್ನು ಆತನ ಜೊತೆಗಾರರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಉಳ್ಳಾಲ ಪೊಲೀಸ್ ಠಾಣೆಯ ಅಂದಿನ ಇನ್ ಸ್ಪೆಕ್ಟರ್ ಧರ್ಮೇಂದ್ರ ಹಾಗೂ ಮದನ್ ಗಾಂವ್ಕರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಆರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 20 ಸಾಕ್ಷಿದಾರರ ಹೇಳಿಕೆ ಹಾಗೂ 50 ದಾಖಲೆಗಳನ್ನು ಪರಿಗಣಿಸಿ ಮೂವರು ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದಾರೆ.

ABOUT THE AUTHOR

...view details