ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಂಗಳೂರು: ನಗರದ ರೋಶನಿ ನಿಲಯದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಪರಿವರ್ತನಾ ಸಭೆಯಲ್ಲಿ ಸನ್ನಡತೆ ಹಿನ್ನೆಲೆ 783 ಮಂದಿಯ ಮೇಲಿದ್ದ ರೌಡಿಶೀಟರ್ ಪ್ರಕರಣವನ್ನು ತೆಗೆದುಹಾಕಿರುವುದಾಗಿ ಘೋಷಿಸಲಾಯಿತು. ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2,305 ರೌಡಿಶೀಟರ್ಗಳಿದ್ದು, ಇದರಲ್ಲಿ 1205 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಮುಕ್ತಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಇದರಲ್ಲಿ 783 ಮಂದಿಯ ರೌಡಿಗಳ ಮೇಲಿದ್ದ ರೌಡಿಶೀಟರ್ ಪಟ್ಟ ತೆಗೆದುಹಾಕಲಾಗಿದೆ.
ರೌಡಿಶೀಟರ್ ಹಣೆಪಟ್ಟಿಯನ್ನು ಕಳಚಿಕೊಂಡ 783 ಮಂದಿ: ಮಂಗಳೂರು ದಕ್ಷಿಣ ಉಪವಿಭಾಗದ 828 ರೌಡಿಗಳಲ್ಲಿ 274 ರೌಡಿಗಳ ಫೈಲ್ ಮುಕ್ತಾಯಗೊಳಿಸಲಾಗಿದ್ದು, ಇನ್ನು 554 ಮಂದಿ ರೌಡಿಶೀಟರ್ಗಳು ಬಾಕಿ ಇದ್ದಾರೆ. ಉತ್ತರ ಉಪವಿಭಾಗದಲ್ಲಿ 863 ರೌಡಿಶೀಟರ್ಗಳಿದ್ದು, ಇದರಲ್ಲಿ 298 ಮಂದಿಯ ರೌಡಿಶೀಟರ್ ತೆಗೆದುಹಾಕಲಾಗಿದೆ. ಇನ್ನು 565 ಮಂದಿ ರೌಡಿಶೀಟರ್ಗಳಿದ್ದಾರೆ. ಕೇಂದ್ರ ಉಪವಿಭಾಗದಲ್ಲಿ 614 ರೌಡಿಶೀಟರ್ಗಳಿದ್ದು, ಇದರಲ್ಲಿ 211 ಮಂದಿಯ ರೌಡಿಶೀಟರ್ ಪಟ್ಟ ತೆಗೆದುಹಾಕಲಾಗಿದೆ. ಇಲ್ಲಿ 403 ಮಂದಿ ರೌಡಿಶೀಟರ್ಗಳಿದ್ದಾರೆ. ಒಟ್ಟು 783 ಮಂದಿಯನ್ನು ರೌಡಿಶೀಟರ್ನಿಂದ ತೆಗೆದುಹಾಕಲಾಗಿರುವುದರಿಂದ, ಸದ್ಯ 1,522 ಮಂದಿ ರೌಡಿಶೀಟರ್ಗಳು ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಇದ್ದಾರೆ.
ಈಗ ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕಲಾದ 783 ಮಂದಿ ಹಲವು ವರ್ಷಗಳಿಂದ ರೌಡಿಶೀಟರ್ ಹಣೆಪಟ್ಟಿ ಹೊತ್ತಿದ್ದರು. ಸುಮಾರು 25 ರಿಂದ 60 ವರ್ಷಗಳವರೆಗಿನ ರೌಡಿಶೀಟರ್ಗಳು ಇದರಲ್ಲಿ ಇದ್ದು, ಇವರು ಇಂದು ತಮ್ಮ ಮೇಲಿದ್ದ ರೌಡಿಶೀಟರ್ ಹಣೆಪಟ್ಟಿಯನ್ನು ಕಳಚಿಕೊಂಡಿದ್ದಾರೆ. ರೌಡಿಶೀಟರ್ಗಳೆಂದರೆ ಸಾಮಾಜಿಕವಾಗಿ , ಕಾನೂನಾತ್ಮಕವಾಗಿ ಬೇರೆಯೇ ರೀತಿಯಲ್ಲಿ ನೋಡುವ ಪರಿಪಾಠವಿದೆ. ಇವರಲ್ಲಿ ಹಲವು ಮಂದಿ ಒಂದೊಮ್ಮೆ ತಪ್ಪು ಮಾಡಿ ಬಳಿಕ ಪಶ್ಚಾತ್ತಾಪ ಮಾಡಿಕೊಂಡವರೂ ಇದ್ದಾರೆ.
ಆದರೂ ಅವರ ಮೇಲಿನ ರೌಡಿಶೀಟರ್ ಹಣೆಪಟ್ಟಿಯಿಂದ ಜಾತ್ರೆ, ರಾಜಕೀಯ ಸಭೆ, ಗಲಭೆ ಮತ್ತಿತ್ತರ ಸಂದರ್ಭಗಳಲ್ಲಿ ಪೊಲೀಸ್ ಠಾಣೆಗೆ ಹಾಜರಾಗಬೇಕಾದ ಪರಿಸ್ಥಿತಿ ಇತ್ತು. ಆ ಬಳಿಕ ಯಾವುದೇ ಅಪರಾಧ ಮಾಡದೇ ಇದ್ದರೂ ಅವರಿಗೂ ಪೊಲೀಸ್ ಠಾಣೆ ಮೆಟ್ಟಿಲೇರುವುದು ಅನಿವಾರ್ಯವಾಗಿತ್ತು. ಇದೀಗ ರೌಡಿಶೀಟರ್ ಹಣೆಪಟ್ಟಿ ಕಳಚಿರುವುದರಿಂದ ಮುಂದೆ ಅವರಿಗೆ ಈ ಸಮಸ್ಯೆಗಳು ಎದುರಾಗುವುದಿಲ್ಲ.
ಡಿಜಿಪಿ ಪ್ರವೀಣ್ ಸೂದ್, ಎಡಿಜಿಪಿ ಅಲೋಕ್ ಕುಮಾರ್ ಸೂಚನೆ: ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ರೌಡಿಶೀಟರ್ಗಳ ರಿವ್ಯೂ ಮಾಡಲಾಗಿತ್ತು. ಡಿಜಿಪಿ ಪ್ರವೀಣ್ ಸೂದ್, ಎಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ಕಳೆದ ಎರಡು ತಿಂಗಳಿಂದ ಪ್ರಕ್ರಿಯೆ ನಡೆಸಿ 783 ಮಂದಿಯ ರೌಡಿಶೀಟರ್ಗಳನ್ನು ಪಟ್ಟಿಯಿಂದ ಮುಕ್ತ ಮಾಡಿದ್ದೇವೆ. ಅವರ ಮೇಲಿನ ಕೇಸು, ಅವರ ಸುತ್ತಮುತ್ತಲಿನವರ ಅಭಿಪ್ರಾಯ, ಅವರಿಂದ ತೊಂದರೆಗೊಳಪಟ್ಟವರ ಅಭಿಪ್ರಾಯ, ನ್ಯಾಯಾಲಯದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು, ಕೆಲವರು ಅಂಗವಿಕಲರಾಗಿರುವುದು, ವಯಸ್ಸಾದವರು ಅವರನ್ನೆಲ್ಲ ಗಮನದಲ್ಲಿಟ್ಟುಕೊಂಡು ರೌಡಿಶೀಟರ್ ಪಟ್ಟಿಯಿಂದ ಅವರನ್ನು ಮುಕ್ತಗೊಳಿಸಲಾಗಿದೆ ಎಂದರು.
5 ಮಂದಿಯ ಮೇಲೆ ಗೂಂಡಾ ಆಕ್ಟ್ ಜಾರಿ: ಕಳೆದ ವರ್ಷದ ಫೆಬ್ರವರಿಯಲ್ಲಿ 1 ಸಾವಿರ ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಮುಕ್ತಗೊಳಿಸಿದ್ದೆವು. 2,305 ರೌಡಿಶೀಟರ್ಗಳಲ್ಲಿ 783 ರೌಡಿಶೀಟರ್ಗಳನ್ನು ಪಟ್ಟಿಯಿಂದ ಮುಕ್ತಗೊಳಿಸಿರುವುದರಿಂದ ಇನ್ನು 1,522 ರೌಡಿಶೀಟರ್ಗಳು ಇದ್ದಾರೆ. ರೌಡಿಶೀಟರ್ ಹಣೆಪಟ್ಟಿ ಇರುವವರ ಮೇಲೆ ನಿಗಾ ಇಟ್ಟಿದ್ದೇವೆ. ಕಳೆದ ಒಂದು ವರ್ಷದಲ್ಲಿ ತೊಂದರೆಗೀಡುಮಾಡುವ 10 ರೌಡಿಶೀಟರ್ಗಳನ್ನು ಗಡಿಪಾರು ಮಾಡಿದ್ದೇವೆ. 5 ಮಂದಿಯ ಮೇಲೆ ಗೂಂಡಾ ಆ್ಯಕ್ಟ್ ಜಾರಿ ಮಾಡಿದ್ದೇವೆ. ಇದು ನಿರಂತರ ಪ್ರಕ್ರಿಯೆ. ಯಾರು ಉತ್ತಮ ಗುಣ ನಡತೆ ಇಟ್ಟುಕೊಂಡು ಮುಖ್ಯವಾಹಿನಿಯಲ್ಲಿ ಬದುಕಲು ಪ್ರಯತ್ನಿಸುತ್ತಾರೋ ಅವರಿಗೆ ಇದು ಒಳ್ಳೆಯ ಅವಕಾಶ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.
ದೇಶದಲ್ಲಿ ಸತ್ಪ್ರಜೆಯಾಗಿ ಬದುಕುತ್ತೇವೆ: ಇನ್ನು ರೌಡಿಶೀಟರ್ ಕಳಂಕದಿಂದ ಹೊರಬಂದ ರವಿ ರೈ ಪಜೀರ್ ಮಾತನಾಡಿ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ. ಸಜ್ಜನರಾಗಿ ಬದುಕುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶ. ನಾವೆಲ್ಲರೂ ಸಜ್ಜನರಾಗಿ ಅಣ್ಣ ತಮ್ಮಂದಿರಂತೆ ಬದುಕಬೇಕು. ಜಿಲ್ಲೆಯ ಸೌಹಾರ್ದ ಕಾಪಾಡಬೇಕು. ನಾವು ಮಾದರಿಯಾಗಿ ಬದುಕುವುದನ್ನು ತೋರ್ಪಡಿಸಬೇಕಾಗಿದೆ. ನಾವು ಕಾನೂನು ಕೈಗೆತ್ತಿಕೊಳ್ಳದೆ ಕಾರ್ಯ ನಿರ್ವಹಿಸಬೇಕು. ಇನ್ನು ಮುಂದೆ ಅಂತಹ ತಪ್ಪು ಮಾಡುವುದಿಲ್ಲ. ದೇಶದಲ್ಲಿ ಸತ್ಪ್ರಜೆಯಾಗಿ ಬದುಕುತ್ತೇವೆ ಎಂದರು.
ಇದನ್ನು ಓದಿ:ಇಂಡೋ - ಪಾಕ್ ಗಡಿಯಿಂದ 2 ಕಿಮೀ ದೂರದಲ್ಲಿ ಹೈಟೆಕ್ ಡ್ರೋನ್ ಹೊಡೆದುರುಳಿಸಿದ ಪೊಲೀಸರು: 5 ಕೆಜಿ ಹೆರಾಯಿನ್ ಜಪ್ತಿ