ಕರ್ನಾಟಕ

karnataka

ETV Bharat / state

ಮನೆಮಂದಿ ಕಟ್ಟಿಹಾಕಿ ದರೋಡೆ ಪ್ರಕರಣ: ಆರು ಆರೋಪಿಗಳ ಬಂಧನ - ಈಟಿವಿ ಭಾರತ್​ ಕನ್ನಡ ನ್ಯೂಸ್

Puttur crime : ಡಿವೈಎಸ್‌ಪಿ ನೇತೃತ್ವದಲ್ಲಿ ರಚನೆ ಮಾಡಿದ ಪೊಲೀಸ್​ ಅಧಿಕಾರಿಗಳ ತಂಡ ಆರು ಮಂದಿ ಅರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದೆ.

ದರೋಡೆ ಪ್ರಕರಣದ ಆರು ಆರೋಪಿಗಳ ಬಂಧನ
ದರೋಡೆ ಪ್ರಕರಣದ ಆರು ಆರೋಪಿಗಳ ಬಂಧನ

By ETV Bharat Karnataka Team

Published : Sep 29, 2023, 10:52 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿಕೆ

ಪುತ್ತೂರು (ದಕ್ಷಿಣ ಕನ್ನಡ) :ಸೆ.6 ರಂದು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ಮಾಡಲಾಗಿತ್ತು. ಇದೀಗ ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿ, ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಪುತ್ತೂರು ಎಎಸ್‌ಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರಕರಣವನ್ನು ಭೇದಿಸಿದ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಕಿಣಿಯರ ಪಾಲು ನಿವಾಸಿ ಸುಧೀರ್(38), ಕೇರಳ ರಾಜ್ಯದ ಕಾಸರಗೋಡು ಪೈವಳಿಕೆ ಸಮೀಪದ ಮಂಜೇಶ್ವರ ಗ್ರಾಮದ ಅಟ್ಟೆಗೋಳಿ ಮಂಜಳ್ತೋಡಿ ನಿವಾಸಿ ಕಿರಣ್ ಟಿ (29), ಕಾಂಞಗಾಡ್ ಸಮೀಪದ ಮೂವರಿಕುಂಡ ಕಂಡತ್ತೀಲ್ ವೀಡು ನಿವಾಸಿ ಸನಾಲ್ ಕೆ.ವಿ ( 34), ಎಡನಾಡು ಗ್ರಾಮದ ಮುಗು ಸೀತಂಗೋಳಿ ರಾಜೀವ ಗಾಂಧಿ ಕಾಲೋನಿ ನಿವಾಸಿ ಮಹಮ್ಮದ್ ಫೈಝಲ್ (37), ಅಬ್ದುಲ್ ನಿಝಾರ್ (21) ಮತ್ತು ಮಂಜೇಶ್ವರ ತಾಲೂಕಿನ ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ ಎಂ (31) ಬಂಧಿತ ಆರೋಪಿಗಳು.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ

ಆರೋಪಿಗಳಾದ ಕಿರಣ್ ಟಿ, ಸುಧೀರ್ ಕುಮಾರ್ ಮಣಿಯಾಣಿ, ಸನಾಲ್ ಕೆ.ವಿ ಎಂಬವರನ್ನು ಗುರುವಾರ ರಾತ್ರಿ ಪುತ್ತೂರು ತಾಲೂಕಿನ ನಿಡ್ಪಳ್ಳಿಯಲ್ಲಿ ಬಂಧಿಸಲಾಗಿದ್ದು, ಉಳಿದಂತೆ ಮಹಮ್ಮದ್ ಫೈಝಲ್, ಅಬ್ದುಲ್ ನಿಝಾರ್ ಮತ್ತು ವಸಂತ ಎಂಬವರನ್ನು ಶುಕ್ರವಾರ ಕಾಸರಗೋಡು ಜಿಲ್ಲೆಯ ಮುನಿಯಂಪಾಲ ಎಂಬಲ್ಲಿ ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು, ಮಾರಕಾಸ್ತ್ರಗಳು, ಬೈಕ್ ಹಾಗೂ ದರೋಡೆ ಮಾಡಿರುವ ಚಿನ್ನದ ಬಳೆ, ಸರ, ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ :ದರೋಡೆ ನಡೆಸಿದ 7 ಮಂದಿ ಆರೋಪಿಗಳು ಎಲ್ಲರೂ ಕ್ರಿಮಿನಲ್ ಹಿನ್ನಲೆ ಹೊಂದಿದವರಾಗಿದ್ದಾರೆ. ಆರೋಪಿ ರವಿ ಕೇರಳದಲ್ಲಿ ನಡೆಸಿದ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವನಾಗಿದ್ದಾನೆ. ಕೇರಳದ ಜೈಲ್‌ನಲ್ಲಿದ್ದ ಈತ ಪೆರೋಲ್‌ನಲ್ಲಿ ಹೊರ ಬಂದಿದ್ದಾಗ ಈ ಕೃತ್ಯದಲ್ಲಿ ಭಾಗಿಯಾಗಿ ಬಳಿಕ ಇದೀಗ ಜೈಲಿಗೆ ಮರಳಿದ್ದಾನೆ. ಕೇರಳ ಜೈಲ್‌ನಲ್ಲಿದ್ದ ಸನಲ್ ಮೇಲೆ 15 ಕೇಸುಗಳಿವೆ. ಸುದೀರ್‌ನ ಮೇಲೆ 2 ಕೇಸ್​ ವಸಂತ ಎಂಬಾತನ ಮೇಲೆ 4 ಕೇಸ್​, ಕಿರಣ್ ಮೇಲೆ 3 ಕೇಸ್​, ಫೈಸಲ್ ಮೇಲೆ 3 ಕೇಸ್​ ಹಾಗೂ ನಿಸಾರ್ ಮೇಲೆ 2 ಕೇಸುಗಳಿವೆ. ಇವರೆಲ್ಲರೂ ಜೈಲ್‌ನಲ್ಲಿ ಪರಿಚಯವಾಗಿ ಬಳಿಕ ಒಟ್ಟಾಗಿ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ.

ಸಾಕಷ್ಟು ಪೂರ್ವ ತಯಾರಿಯಲ್ಲಿ ದರೋಡೆ ನಡೆಸಲಾಗಿತ್ತು. ಆರೋಪಿಗಳೇ ದಾರ ಮತ್ತು ಬಟ್ಟೆಯನ್ನು ತಂದು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಬಳಿಕ ಅದೆಲ್ಲವನ್ನೂ ಹಿಂದಕ್ಕೆ ಪಡೆದುಕೊಂಡು ಹೋಗಿದ್ದರು. ಬಹಳ ತಾಂತ್ರಿಕವಾಗಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರವಿ ಅವರನ್ನು ಒಳಗೊಂಡ ತಂಡವನ್ನು ಮಾಡಿ ಪತ್ತೆಗೆ ಪ್ರಯತ್ನ ನಡೆಸಲಾಗಿತ್ತು. ಅವರು ತುಂಬಾ ಶ್ರಮ ವಹಿಸಿ ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಮತ್ತು ಉತ್ತಮ ಸೇವಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್‌ಪಿ ಅವರು ತಿಳಿಸಿದರು.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ :ಜಿಲ್ಲಾ ಎಸ್‌ಪಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಎಸ್ಪಿ ಧರ್ಮಪ್ಪ ಎನ್.ಎಂ ಅವರ ನಿರ್ದೇಶನ ಮತ್ತು ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ಅವರ ಮಾರ್ಗದರ್ಶನದಲ್ಲಿ ದಡೋಡೆ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ರವಿ.ಬಿ.ಎಸ್ ಅವರ ನೇತೃತ್ವದ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಸ್‌ಐ ಉದಯರವಿ ಎಂ.ವೈ, ಸಂಪ್ಯ ಠಾಣೆಯ ಎಸ್‌ಐ ಧನಂಜಯ ಬಿ.ಸಿ, ಉಪ್ಪಿನಂಗಡಿ ಠಾಣೆಯ ಎಸ್‌ಐ ರುಕ್ಮ ನಾಯ್ಕ್ ಅವರನ್ನೊಳಗೊಂಡ ವಿಶೇಷ ಪೊಲೀಸ್ ತಂಡ ಆರೋಪಿಗಳನ್ನು ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜೀವಾವಧಿ ಶಿಕ್ಷೆಗೆ ಒಳಗಾದಾತ ಭಾಗಿ :ಕೇರಳದ ಇಚ್ಲಂಗೋಡು ಕಂಪಲದ ಪಚ್ಚಂಬಳ ನಿವಾಸಿ ಸುಬ್ಬ ಮಡಿವಾಳ ಅವರ ಪುತ್ರ ರವಿ ಈ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ. ಈತ ಈ ಹಿಂದೆ ನಡೆದಿದ್ದ ಜಬ್ಬಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಕೇರಳದ ಕಣ್ಣೂರಿನ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಪೆರೋಲ್‌ನಲ್ಲಿ ಜೈಲಿನಿಂದ ಹೊರ ಬಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಕೃತ್ಯ ನಡೆಸಿದ ಬಳಿಕ ಪೆರೋಲ್ ಮುಗಿದು ಮತ್ತೆ ಜೈಲು ಸೇರಿಕೊಂಡಿದ್ದಾನೆ. ಬಾಡಿ ವಾರೆಂಟ್ ಹೊರಡಿಸಿ ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಪ್ರಕರಣದ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ :ಮಂಗಳೂರು ಸಿಸಿಬಿಯಿಂದ ಭರ್ಜರಿ ಕಾರ್ಯಾಚರಣೆ: ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳ ಸೆರೆ

ABOUT THE AUTHOR

...view details